ನವದೆಹಲಿ : ರಾಜಕೀಯ ಪಕ್ಷಗಳು ಚುನಾವಣೆಗೂ ಮುನ್ನ ಘೋಷಿಸುವ 'ಉಚಿತಗಳಿಗೆ' ಸುಪ್ರೀಂ ಕೋರ್ಟ್ ಬುಧವಾರ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಜನರು ಉಚಿತ ಪಡಿತರ ಮತ್ತು ಹಣ ಪಡೆಯುತ್ತಿರುವುದರಿಂದ ಕೆಲಸ ಮಾಡಲು ಹಿಂದೇಟು ಹಾಕುತ್ತಿದ್ದಾರೆ ಎಂದು ಹೇಳಿದೆ.
"ಬಡವರನ್ನು ಮುಖ್ಯವಾಹಿನಿಗೆ ತಂದು, ಅವರೂ ದೇಶದ ಅಭಿವೃದ್ಧಿಗೆ ಕೊಡುಗೆ ನೀಡುವಂತೆ ಉತ್ತೇಜಿಸಬೇಕು. ಅದನ್ನು ಬಿಟ್ಟು ಜನರ ಅಗತ್ಯಗಳನ್ನು ಉಚಿತವಾಗಿ ನೀಡುವ ಮೂಲಕ ಅವರನ್ನು ಪರಾವಲಂಬಿ ಮಾಡಲಾಗುತ್ತಿದೆ" ಎಂದು ಅಭಿಪ್ರಾಯಪಟ್ಟಿತು.
ನಗರ ಪ್ರದೇಶಗಳಲ್ಲಿ ನಿರಾಶ್ರಿತರಿಗೆ ಉಚಿತವಾಗಿ ಆಶ್ರಯ ಒದಗಿಸಲು ಸರ್ಕಾರಗಳಿಗೆ ಸೂಚಿಸಬೇಕು ಎಂದು ಕೋರಿ ಸಲ್ಲಿಸಲಾದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಬಿ. ಆರ್. ಗವಾಯಿ ಮತ್ತು ಆಗಸ್ಟೀನ್ ಜಾರ್ಜ್ ಮಸಿಹ್ ಅವರಿದ್ದ ಪೀಠವು, ಇದು 'ಉಚಿತವಲ್ಲ' ಎಂದು ಅಭಿಪ್ರಾಯಪಟ್ಟಿತು.
"ರಾಜಕೀಯ ಪಕ್ಷಗಳು ಘೋಷಿಸಿದ ಉಚಿತ ಕೊಡುಗೆಗಳಿಂದಾಗಿ ಜನರು ಕೆಲಸ ಮಾಡುತ್ತಿಲ್ಲ. ಕಾರಣ, ಏನೂ ಮಾಡದೆಯೂ ಉಚಿತವಾಗಿ ಪಡಿತರ ಮತ್ತು ಹಣ ಪಡೆಯುತ್ತಿದ್ದಾರೆ. ಹೀಗಿರುವಾಗ ಅವರ್ಯಾಕೆ ದುಡಿಯಲು ಹೋಗುತ್ತಾರೆ" ಎಂದು ಪ್ರಶ್ನಿಸಿತು.
ಕೃಷಿಗೆ ಕಾರ್ಮಿಕರೇ ಸಿಗ್ತಿಲ್ಲ : "ಜನರು ಪಡಿತರವನ್ನು ಉಚಿತವಾಗಿ ಪಡೆಯುತ್ತಿರುವ ಕಾರಣ, ಅವರು ದುಡಿಯಲು ಹೋಗುತ್ತಿಲ್ಲ. ಇದರಿಂದ ಕೃಷಿಗೆ ಕಾರ್ಮಿಕರ ಕೊರತೆಯಾಗಿದೆ. ನಾನೂ ಕೃಷಿ ಪ್ರಧಾನ ಕುಟುಂಬದಿಂದಲೇ ಬಂದಿದ್ದು. ಕೃಷಿಕರು ಏನೆಲ್ಲಾ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂಬುದು ನನಗೆ ತಿಳಿದಿದೆ. ಇದನ್ನು ನಾನು ಮಹಾರಾಷ್ಟ್ರದಲ್ಲಿ ಕಂಡಿದ್ದೇನೆ" ಎಂದು ನ್ಯಾಯಮೂರ್ತಿ ಬಿ. ಆರ್. ಗವಾಯಿ ಅವರು ತಮ್ಮ ಅನುಭವವನ್ನು ಹಂಚಿಕೊಂಡರು.
ದುಡಿಯದಿದ್ದರೂ ಕೈಯಲ್ಲಿ ದುಡ್ಡು : "ದುರಾದೃಷ್ಟವಶಾತ್ ರಾಜಕೀಯ ಪಕ್ಷಗಳು ಉಚಿತವಾಗಿ ಹಣವನ್ನು ಯೋಜನೆಯ ರೂಪದಲ್ಲಿ ನೀಡುತ್ತಿರುವ ಕಾರಣ, ಜನರು ದುಡಿತದಿಂದ ವಿಮುಖವಾಗಿದ್ದಾರೆ. ಕಾರಣ, ಅವರ ಕೈಯಲ್ಲಿ ಏನೂ ಮಾಡದಿದ್ದರೂ ಹಣ ಬರುತ್ತದೆ. ಇದು ಅವರನ್ನು ಪರಾವಲಂಬಿಯನ್ನಾಗಿ ಮಾಡಿದೆ. ಲಡ್ಕಿ ಬಹಿನ್ನಂತಹ ಯೋಜನೆಗಳು ಜನರನ್ನು ಕೆಲಸ ಮಾಡದಂತೆ ಮಾಡಿವೆ" ಎಂದು ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿತು.
ನಿರಾಶ್ರಿತ ಮತ್ತು ಬಡರಿಗೆ ಮಾತ್ರ ಈ ಯೋಜನೆಗಳಿವೆ. ಅವರ ದುಡಿಮೆಯು ಹೊಟ್ಟೆಗೆ ಸಾಕಾಗುತ್ತದೆ. ಉಚಿತ ಸೂರು ನೀಡುವುದು ಅನಿವಾರ್ಯವಾಗಿದೆ ಎಂದು ವಕೀಲ ಪ್ರಶಾಂತ್ ಭೂಷಣ್ ಕೋರ್ಟ್ ಗಮನಕ್ಕೆ ತಂದಾಗ, ಈ ಬಗ್ಗೆ ಸಮತೋಲಿತ ನಿರ್ಧಾರ ಕೈಗೊಳ್ಳಬೇಕಿದೆ. ಇಲ್ಲಿ ಬಡವ, ಶ್ರೀಮಂತ ಎಂಬುದಿಲ್ಲ. ನ್ಯಾಯಾಲಯವನ್ನು ರಾಜಕೀಯ ಭಾಷಣಕ್ಕೆ ಬಳಸಿಕೊಳ್ಳಬೇಡಿ ಎಂದು ವಕೀಲರಿಗೆ ಕೋರ್ಟ್ ಸೂಚಿಸಿತು.
ಇದನ್ನೂ ಓದಿ: ಶಿಕ್ಷೆಗೊಳಗಾದ ರಾಜಕಾರಣಿ ಸಂಸತ್ತು ಮತ್ತು ಶಾಸಕಾಂಗ ಪ್ರವೇಶಿಸುತ್ತಿರುವುದು ಹೇಗೆ?: ಸುಪ್ರೀಂ ಪ್ರಶ್ನೆ