ಹೈದರಾಬಾದ್ : ರಸ್ತೆ ಅಪಘಾತದಲ್ಲಿ ಸಾಫ್ಟ್ವೇರ್ ಉದ್ಯೋಗಿಯಾಗಿದ್ದ ಮಹಿಳೆ ಸಾವನ್ನಪ್ಪಿದ ಪ್ರಕರಣ ಸಂಬಂಧ ಪರಿಹಾರ ನೀಡುವ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಮೃತ ಮಹಿಳೆಯ ಕುಟುಂಬಕ್ಕೆ 9.64 ಕೋಟಿ ರೂಪಾಯಿ ನೀಡುವಂತೆ ನ್ಯಾ. ಸಂಜಯ್ ಕರೋಲ್ ಮತ್ತು ನ್ಯಾ. ಪ್ರಶಾಂತ್ ಕುಮಾರ್ ಮಿಶ್ರಾ ಅವರಿದ್ದ ಸುಪ್ರೀಂ ಕೋರ್ಟ್ ಪೀಠವು ಮಂಗಳವಾರ (ಫೆ.11) ಈ ತೀರ್ಪು ಹೊರಡಿಸಿದೆ.
2009ರಲ್ಲಿ ನಡೆದಿದ್ದ ಅಪಘಾತದಲ್ಲಿ ಮಹಿಳೆ ಸಾವು ; ಜೂನ್ 13, 2009ರಲ್ಲಿ ಅಮೆರಿಕದ ಸಾಫ್ಟ್ವೇರ್ ಉದ್ಯೋಗಿಯಾಗಿದ್ದ ಆಂಧ್ರದ ಲಕ್ಷ್ಮೀ ನಾಗಲ್ಲಾ ಅವರು ತಮ್ಮ ಪತಿ ಮತ್ತು ಮಕ್ಕಳೊಂದಿಗೆ ಕುಟುಂಬ ಸಮೇತ ಅನ್ನಾವರಂನಿಂದ ರಾಜಮಹೇಂದ್ರವರಂಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಎಪಿಎಸ್ಆರ್ಟಿಸಿ ಬಸ್ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ಲಕ್ಷ್ಮಿ ಮೃತಪಟ್ಟಿದ್ದರು.
ಪತಿಯಿಂದ ಕಾನೂನು ಹೋರಾಟ ; ಪತ್ನಿ ಸಾವಿನ ಬಳಿಕ ಲಕ್ಷ್ಮೀ ಅವರ ಪತಿ ಶಾಮ್ ಪ್ರಸಾದ್ ನಾಗಲ್ಲಾ ಅವರು ಸಿಕಂದರಾಬಾದ್ನ ವಾಹನ ಅಪಘಾತ ಮಂಡಳಿಯಲ್ಲಿ ಪರಿಹಾರಕ್ಕೆ ಅರ್ಜಿ ಸಲ್ಲಿಸಿದ್ದರು. ಅಮೆರಿಕದ ಖಾಯಂ ನಿವಾಸಿಯಾಗಿದ್ದ ತಮ್ಮ ಪತ್ನಿ ಕಂಪ್ಯೂಟರ್ ಸೈನ್ಸ್ ಸ್ನಾತಕೋತ್ತರ ಪದವಿಧರೆ ಆಗಿದ್ದರು. ಅಲ್ಲದೆ, ಅಮೆರಿಕದಲ್ಲಿ ಉದ್ಯೋಗಿಯಾಗಿ ಪ್ರತಿ ತಿಂಗಳು 10 ಲಕ್ಷಕ್ಕೂ ಅಧಿಕ ವೇತನ ಪಡೆಯುತ್ತಿದ್ದರು. ಅವರ ಸಾವಿನಿಂದ ಕುಟುಂಬಕ್ಕೆ ಆಘಾತವಾಗಿದೆ. ಅಲ್ಲದೆ, ಆರ್ಥಿಕ ಸಂಕಷ್ಟ ಕೂಡ ಎದುರಾಗಿದೆ ಎಂದು ವಿವರಿಸಿದ್ದರು.
ಅವರ ವಾದ ಆಲಿಸಿದ್ದ ಸಿಕಂದರಾಬಾದ್ನ ವಾಹನ ಅಪಘಾತ ಮಂಡಳಿ, 8.5 ಕೋಟಿ ರೂಪಾಯಿ ಪರಿಹಾರ ನೀಡುವಂತೆ ಎಪಿಎಸ್ಆರ್ಟಿಸಿಗೆ ಸೂಚಿಸಿತ್ತು. ಆದ್ರೆ 2014ರಲ್ಲಿ ಇದನ್ನು ಪ್ರಶ್ನಿಸಿ ಎಪಿಎಸ್ಆರ್ಟಿಸಿಯು ತೆಲಂಗಾಣದ ಹೈಕೋರ್ಟ್ ಮೊರೆ ಹೋಗಿತ್ತು. ಆಗ ಹೈಕೋರ್ಟ್ ವಾದ - ವಿವಾದ ಆಲಿಸಿದ ಬಳಿಕ 5.75 ಕೋಟಿ ರೂಪಾಯಿ ಪರಿಹಾರ ಮೊತ್ತ ನಿಗದಿಪಡಿಸಿ ತೀರ್ಪು ಪ್ರಕಟಿಸಿತ್ತು.
ಸುಪ್ರೀಂ ಮೆಟ್ಟಿಲೇರಿದ ಮೃತಳ ಪತಿ ; ಮೃತ ಲಕ್ಷ್ಮೀ ಅವರ ಪತಿ ಶಾಮ್ ಪ್ರಸಾದ್ ನಾಗಲ್ಲಾ ಅವರು ಹೈಕೋರ್ಟ್ ತೀರ್ಪಿನ ಬಳಿಕ ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದರು.
ಈ ಪ್ರಕರಣದಲ್ಲಿ ನಡೆದ ಸಂಪೂರ್ಣ ಬೆಳವಣಿಗೆ ಪರಿಶೀಲನೆ ಬಳಿಕ ಸರ್ವೋಚ್ಚ ನ್ಯಾಯಾಲಯವು ಆಂಧ್ರಪ್ರದೇಶ ರಸ್ತೆ ಸಾರಿಗೆ ಸಂಸ್ಥೆ (APSRTC)ಗೆ 9.64 ಕೋಟಿ ರೂಪಾಯಿಯನ್ನು ಪರಿಹಾರವಾಗಿ ನೀಡುವಂತೆ ಅಂತಿಮ ತೀರ್ಪು ಪ್ರಕಟಿಸಿದೆ. ಇದರಿಂದ ಸುದೀರ್ಘ ಕಾನೂನು ಹೋರಾಟ ನಡೆಸಿದ ಮಹಿಳೆಯ ಕುಟುಂಬಕ್ಕೆ ನ್ಯಾಯ ಸಿಕ್ಕಂತಾಗಿದೆ.
ಇದನ್ನೂ ಓದಿ : 4 ವರ್ಷ ಪ್ರೀತಿಸಿ ಮದುವೆ; ಎರಡೇ ತಿಂಗಳಲ್ಲಿ ಬೇರ್ಪಟ್ಟ ದಂಪತಿಗೆ ವಿಚ್ಛೇದನ, ಪತ್ನಿಗೆ 10 ಲಕ್ಷ ರೂ. ಜೀವನಾಂಶ