ಶಿಲೆ ಸಿಕ್ಕ ಸ್ಥಳದಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಗುದ್ದಲಿ ಪೂಜೆ ಮೈಸೂರು:ಅಯೋಧ್ಯೆಯ ರಾಮ ಮಂದಿರದಲ್ಲಿ ಇಂದು ಪ್ರತಿಷ್ಠಾಪನೆಯಾದ ಬಾಲರಾಮ ಮೂರ್ತಿಯ ಕೆತ್ತನೆಗೆ ಬಳಸಿರುವ ಕೃಷ್ಣ ಶಿಲೆ ಸಿಕ್ಕ ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದ ಹಾರೋಹಳ್ಳಿ-ಗುಜ್ಜೆಗೌಡನ ಪುರ ಬಳಿಯ ಭೂಮಿಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಗುದ್ದಲಿ ಪೂಜೆಯನ್ನು ಶಾಸಕ ಜಿ.ಟಿ.ದೇವೇಗೌಡ ಹಾಗೂ ಗ್ರಾಮಸ್ಥರ ಸಮ್ಮುಖದಲ್ಲಿ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಜಮೀನಿನ ಮಾಲೀಕ ಹಾಗೂ ಕೃಷ್ಣ ಶಿಲೆಯನ್ನು ಅಯೋಧ್ಯೆಗೆ ಕಳುಹಿಸಿಕೊಟ್ಟ ಶ್ರೀನಿವಾಸ್ ಹಾಗೂ ಗ್ರಾಮಸ್ಥರು ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಬಾಲರಾಮ ಮೂರ್ತಿ ಕೆತ್ತನೆಗೆ ಶಿಲೆ ಸಿಕ್ಕ ಜಮೀನಿನಲ್ಲಿ ರಾಮ ಮಂದಿರ ನಿರ್ಮಾಣದ ಶಂಕುಸ್ಥಾಪನೆಗೆ ಆಗಮಿಸಿದ್ದ ಸಂಸದ ಪ್ರತಾಪ್ ಸಿಂಹ ಅವರಿಗೆ ಗ್ರಾಮದ ಕೆಲ ಸಮಾಜದ ಮುಖಂಡರು ಘೇರಾವ್ ಹಾಕಿರುವ ಘಟನೆ ಇಂದು ನಡೆದಿದೆ. ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದ ಹಾರೋಹಳ್ಳಿ-ಗುಜ್ಜೆಗೌಡನ ಪುರದ ಸಮೀಪದಲ್ಲಿ ಘಟನೆ ನಡೆದಿದೆ.
ನೀವು ಭೂಮಿ ಪೂಜೆಗೆ ಬರುವುದು ಬೇಡ ಎಂದು ಸಂಸದರ ಕಾರನ್ನು ತಡೆದಿದ್ದು, ನಂತರ ಕಾರಿನಿಂದ ಇಳಿದು ಭೂಮಿ ಪೂಜೆ ನಡೆಯುತ್ತಿರುವ ಸ್ಥಳಕ್ಕೆ ಬರಲು ಯತ್ನಿಸಿದಾಗ ಸ್ಥಳೀಯರು ಅವರನ್ನು ಬರದಂತೆ ವಿರೋಧ ವ್ಯಕ್ತಪಡಿಸಿದ್ದಾರೆ. ಸ್ಥಳೀಯರ ವಿರೋಧಕ್ಕೆ ಬೇಸರ ವ್ಯಕ್ತಪಡಿಸಿದ ಪ್ರತಾಪ್ ಸಿಂಹ ಸ್ಥಳದಿಂದ ತಮ್ಮ ಕಾರನ್ನು ಹತ್ತಿ ಹಿಂತಿರುಗಿ ಹೋಗಿದ್ದಾರೆ.
ಇಂದು ಅಯೋಧ್ಯೆಯಲ್ಲಿ ಶ್ರೀ ರಾಮಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಆಗುತ್ತಿದ್ದು, ಅಲ್ಲಿ ಪ್ರತಿಷ್ಠಾಪನೆ ಮಾಡುವ ಬಾಲರಾಮ ಮೂರ್ತಿ ಕೆತ್ತನೆಗೆ ಬಳಸಿರುವ ಕೃಷ್ಣ ಶಿಲೆ ಗುಜ್ಜೆಗೌಡನ ಪುರದ ಸಮೀಪದಲ್ಲಿರುವ ರಾಮದಾಸ್ ಎಂಬುವವರ ಜಮೀನಿನಲ್ಲಿ ಸಿಕ್ಕಿತ್ತು. ಹೀಗಾಗಿ ಈ ಸ್ಥಳದಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಗುದ್ದಲಿ ಪೂಜೆಯನ್ನು ಶಾಸಕ ಜಿ ಟಿ ದೇವೇಗೌಡ ಹಾಗೂ ಗ್ರಾಮಸ್ಥರ ಸಮ್ಮುಖದಲ್ಲಿ ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸ್ಥಳೀಯ ಶಾಸಕ ಜಿ.ಟಿ ದೇವೇಗೌಡ, ನೆಲೆಬೀಡದ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಇರುವ ಗ್ರಾಮದಲ್ಲಿ ಕೃಷ್ಣ ಶಿಲೆ ಸಿಕ್ಕಿದ್ದು, ಇದೇ ಜಾಗದಲ್ಲಿ ರಾಮ ಮಂದಿರ ನಿರ್ಮಾಣ ಮಾಡಲು ಸಂಕಲ್ಪ ಮಾಡಲಾಗಿದೆ. ಇಲ್ಲಿ ಅಯೋಧ್ಯೆ ಮಾದರಿಯಲ್ಲೇ ಶಿಲ್ಪಿ ಅರುಣ್ ಯೋಗಿರಾಜ್ ಜೊತೆ ಮಾತನಾಡಿ, ದೇವಾಲಯ ನಿರ್ಮಾಣ ಮಾಡಲು ಒಂದು ಕಮಿಟಿಯನ್ನು ರಚಿಸಿ ದೇವಾಲಯ ನಿರ್ಮಾಣಕ್ಕೆ ಬೇಕಾದ ರೂಪುರೇಷೆಗಳನ್ನು ರಚಿಸಲಾಗುವುದು. ಈ ಜಾಗ ದಕ್ಷಿಣದ ಅಯೋಧ್ಯೆ ಆಗಲಿದ್ದು, ದೇವಾಲಯ ನಿರ್ಮಾಣಕ್ಕೆ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎಂದು ಹೇಳಿದರು.
ಜಮೀನಿನ ಮಾಲೀಕ ರಾಮದಾಸ್ ಮಾತಾನಾಡಿ, ನಾವು ಆ ಕಲ್ಲನ್ನು ನಿರುಪಯುಕ್ತ ಎಂದು ತೆಗೆದುಹಾಕಿದ್ದೆವು. ಆದರೆ ನಮ್ಮ ಜಮೀನಿನ ಗರ್ಭಗುಡಿಯಲ್ಲೇ ಶ್ರೀ ರಾಮ ಅಡಗಿದ್ದಾನೆ ಎಂಬುದು ಗೊತ್ತಿರಲಿಲ್ಲ. ಇದೇ ಜಾಗದಲ್ಲಿ ರಾಮ ಮಂದಿರ ನಿರ್ಮಾಣ ಮಾಡುತ್ತೇವೆ. ನಮಗೆ ಮತ್ತು ನಮ್ಮ ಕುಟುಂಬಕ್ಕೆ ತುಂಬಾ ಸಂತೋಷವಾಗಿದೆ. ಇದು ಪೂರ್ವ ಜನ್ಮದ ಪುಣ್ಯ ಇರಬೇಕು ಎಂದು ತಿಳಿಸಿದರು.
ಸಂಸದ ಪ್ರತಾಪ್ ಸಿಂಹ ಪ್ರತಿಕ್ರಿಯೆ: ರಾಮ ಮಂದಿರದ ಭೂಮಿ ಪೂಜೆ ವೇಳೆ ನಾಲ್ಕು ಜನ ಕಿಡಿಗೇಡಿಗಳು ಗಲಾಟೆ ಮಾಡಿದರು. ಅದರಲ್ಲಿ ಕಾಂಗ್ರೆಸ್ನ ಕೆಲವರು ಹಾಗೂ ಯಾರೋ ನಾಲ್ಕು ಜನ ಮಹಿಷಾ ಭಕ್ತರಿದ್ದಾರೆ ಎಂದು ಸಂಸದ ಪ್ರತಾಪ್ ಸಿಂಹ ಪ್ರತಿಕ್ರಿಯೆ ನೀಡಿದ್ದಾರೆ. ಮೈಸೂರಿನ ಅರಮನೆ ಮುಂಭಾಗದ ಕೋಟೆ ಆಂಜನೇಯ ದೇವಸ್ಥಾನದ ಬಳಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಾನು ಈ ಕ್ಷಣಕ್ಕೂ ಮಹಿಷಾ ದಸರಾದ ವಿರೋಧಿ. ಮಹಿಷಾ ದಸರಾ ವಿರೋಧ ಮಾಡಿದ್ದಕ್ಕೆ ಯಾರೋ ನಾಲ್ಕು ಜನ ಕಿಡಿಗೇಡಿಗಳು ಗಲಾಟೆ ಮಾಡಿದರು. ನಾನು ಚಾಮುಂಡಿ ಭಕ್ತ, ನನ್ನಂತೆ ಕೋಟ್ಯಾಂತರ ಜನ ಚಾಮುಂಡಿ ಭಕ್ತರಿದ್ದಾರೆ. ಇಂತಹ ಗಲಾಟೆಗಳಿಗೆ ನಾನು ಹೆದರುವುದಿಲ್ಲ ಎಂದರು.
ಶಿಲ್ಪಿ ಅರುಣ್ ಯೋಗಿರಾಜ್ರನ್ನು ಪ್ರಧಾನಿ ಬಳಿ ಕರೆದುಕೊಂಡು ಹೋಗಿದ್ದೆ: ಕೇದಾರನಾಥದಲ್ಲಿ ಶಂಕರಾಚಾರ್ಯರ ಮೂರ್ತಿ ಕೆತ್ತಿದಾಗ ಶಿಲ್ಪಿ ಅರುಣ್ ಯೋಗಿರಾಜ್ಗೆ ಕಂಪನಿಯೊಂದು ಗೌರವ ನೀಡಿರಲಿಲ್ಲ. ಕನಿಷ್ಠ ಅವರ ಹೆಸರನ್ನು ಸಹ ಹೇಳಲಿಲ್ಲ. ಆದರೆ ನನ್ನನ್ನು ಭೇಟಿ ಮಾಡಿದ ಅರುಣ್ ಯೋಗಿರಾಜ್ಗೆ ಪ್ರಧಾನಿಯವರನ್ನ ಭೇಟಿ ಮಾಡಿಸಿದೆ. ಆನಂತರ ದೆಹಲಿಯಲ್ಲಿ ಸುಭಾಷ್ ಚಂದ್ರ ಬೋಸ್ ಪ್ರತಿಮೆ ಮಾಡಿದಾಗ ಅವರಿಗೆ ಕ್ರೆಡಿಟ್ ಸಿಕ್ಕಿತು. ಮತ್ತೆ ನಾನು ಅರುಣ್ ಯೋಗಿರಾಜ್ ಅವರನ್ನು ಪ್ರಧಾನಿ ಬಳಿ ಕರೆದುಕೊಂಡು ಹೋದೆ. ಆಗ ನೇರವಾಗಿ ಗುರುತಿಸುವ ಕೆಲಸ ನಡೆಯಿತು. ಈಗ ಹೊಸ ಪಾರ್ಲಿಮೆಂಟ್ ಬಳಿ ಮೂರ್ತಿಗಳನ್ನು ಕೆತ್ತುವ ಕೆಲಸ ಮಾಡಬೇಕಿತ್ತು, ಆದರೆ ಅಷ್ಟರಲ್ಲಿ ಅಯೋಧ್ಯೆಯ ಕೆಲಸ ಬಂತು. ಇದರಲ್ಲಿ ಮೂರು ಕಲಾವಿದರು ಕೆಲಸ ಮಾಡಿದರು. ಇವರು ಮಾಡಿದ ಮೂರ್ತಿಗಳ ಆಯ್ಕೆಗಾಗಿ 15 ಜನರ ಆಯ್ಕೆ ಸಮಿತಿ ಇತ್ತು. ಅದರಲ್ಲಿ 14 ಜನ ಅರುಣ್ ಪ್ರತಿಮೆಯನ್ನು ಮೆಚ್ಚಿಕೊಂಡಿದ್ದಾರೆ. ಬಾಲರಾಮ ಮೂರ್ತಿಗೆ ಕಪ್ಪು ಶಿಲೆ ಸಿಕ್ಕಿದ್ದು ಗುಜ್ಜೆಗೌಡನ ಪುರದ ಭೂಮಿಯಲ್ಲಿ. ಈಗ ಅಲ್ಲೂ ಪೂಜೆ ನಡೆಯುತ್ತಿದೆ. ಇನ್ನೂ ಮುಂದೆ ಅಯೋಧ್ಯೆ ಮತ್ತು ಮೈಸೂರಿನ ನಡುವೆ ನಿರಂತರ ಸಂಬಂಧ ಉಳಿಯುತ್ತದೆ ಎಂದು ಪ್ರತಾಪ್ ಸಿಂಹ ತಿಳಿಸಿದರು.
ಇದನ್ನೂ ಓದಿ :ರಾಮಮಂದಿರ ನಿರ್ಮಾಣದಿಂದ ಭಾರತೀಯರ ಶತ ಶತಮಾನಗಳ ಕನಸು ನನಸು: ಕುಮಾರಸ್ವಾಮಿ