ಹಾವೇರಿ:ನಗರದಲ್ಲಿ ಭಾರಿ ಮಳೆಯಿಂದ ನೀರಿನಲ್ಲಿ ಕೊಚ್ಚಿಹೋಗಿದ್ದ ಬಾಲಕನೊಬ್ಬ ಸಾವನ್ನಪ್ಪಿದ ಘಟನೆ ಗುರುವಾರ ಬೆಳಗ್ಗೆ ನಡೆದಿದೆ. ಮೃತ ಬಾಲಕನನ್ನು 12 ವರ್ಷದ ನಿವೇದನ ಬಸವರಾಜ್ ಗುಡಗೇರಿ ಎಂದು ಗುರುತಿಸಲಾಗಿದೆ.
ನಗರದ ಎಸ್ಪಿ ಕಚೇರಿ ಮುಂದೆ ರಸ್ತೆ ಕಾಣದೆ, ಚರಂಡಿಯಲ್ಲಿ ಬಿದ್ದು ನಿವೇದನ ಕೊಚ್ಚಿ ಹೋಗಿದ್ದ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತು ಪೊಲೀಸರು ಬಾಲಕನ ಶೋಧ ಕಾರ್ಯ ನಡೆಸಿದ್ದರು. ಬಳಿಕ ಬಾಲಕನನ್ನು ಪತ್ತೆ ಹಚ್ಚಲಾಗಿದ್ದು, ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಆತ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾನೆ. ಈ ಬಗ್ಗೆ ಜಿಲ್ಲಾಧಿಕಾರಿ ವಿಜಯಮಹಾಂತೇಶ ಅವರು ದೃಢಪಡಿಸಿದ್ದಾರೆ.
''ಚರಂಡಿ ನೀರಿನಲ್ಲಿ ಕೊಚ್ಚಿ ಹೋಗಿದ್ದ ಬಾಲಕ ಮೃತಪಟ್ಟಿದ್ದಾನೆ. ಅತಿಯಾದ ಮಳೆಯಿಂದಾಗಿ ಘಟನೆ ನಡೆದಿದೆ. ಬಾಲಕನ ಪತ್ತೆಗೆ ನಾವು ಸತತ ಕಾರ್ಯಾಚರಣೆ ಮಾಡಿದ್ದೆವು. ವೈದ್ಯರು ಹೇಳುವಂತೆ, ಆಸ್ಪತ್ರೆಗೆ ಬರುವ ಮುನ್ನವೇ ಬಾಲಕ ಮೃತಪಟ್ಟಿದ್ದಾನೆ'' ಎಂದು ಜಿಲ್ಲಾಧಿಕಾರಿ ವಿಜಯಮಹಾಂತೇಶ ಮಾಹಿತಿ ನೀಡಿದರು.
ಘಟನೆ ಖಂಡಿಸಿ ಪ್ರತಿಭಟನೆ:ಕಾಲುವೆಯಲ್ಲಿ ಬಾಲಕ ಕೊಚ್ಚಿ ಹೋದ ಪ್ರಕರಣ ಖಂಡಿಸಿ, ಸ್ಥಳೀಯರು ಹಾಗೂ ಕುಟುಂಬದ ಸದಸ್ಯರು ಪ್ರತಿಭಟನೆ ನಡೆಸಿದರು. ಶಿವಾಜಿ ನಗರದ 1ನೇ ಕ್ರಾಸ್ ನಲ್ಲಿ ರಸ್ತೆ ಬಂದ್ ಮಾಡಿ ಪ್ರತಿಭಟನೆ ಕೈಗೊಂಡರು. ಕಾಲುವೆ ಒತ್ತುವರಿ ಹಾಗೂ ದುರಸ್ತಿ ಸರಿಯಾಗಿಲ್ಲ ಮಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಪೊಲೀಸರು ಮನವೊಲಿಸುವ ಕಾರ್ಯ ಮಾಡಿದ್ದಾರೆ.