ಮಂಗಳೂರು: ಈಜುಕೊಳದೊಳಗೆ ಉಸಿರು ಬಿಗಿಹಿಡಿದು 37 ಸೆಕೆಂಡ್ಸ್‌ನಲ್ಲಿ 26 ಸೋಮರ್‌ಸಾಲ್ಟ್ಸ್ ಅಂದ್ರೆ ಪಲ್ಟಿ ಹೊಡೆಯುವ ಮೂಲಕ 13ರ ಬಾಲಕ ನೊಬೆಲ್ ವಿಶ್ವ ದಾಖಲೆ ಸೃಷ್ಟಿಸಿದ್ದಾನೆ. ಮಂಗಳೂರಿನ ಕಾರ್ಮೆಲ್ ಸಿಬಿಎಎಸ್‌ಸಿ ಶಾಲೆಯ ಎಂಟನೆ ತರಗತಿಯ ವಿದ್ಯಾರ್ಥಿ ಹ್ಯಾಡ್ರಿಯನ್ ವೇಗಸ್ ವಿಶ್ವ ದಾಖಲೆಗೆ ಎಮ್ಮೆಕೆರೆ ಅಂತಾರಾಷ್ಟ್ರೀಯ ಈಜುಕೊಳ ಸಾಕ್ಷಿಯಾಯಿತು.
ಖ್ಯಾತ ಈಜುಪಟು ಚಂದ್ರಶೇಖರ ರೈ ಎಂಬವರು ಈ ಹಿಂದೆ ಹಿರಿಯರ ವಿಭಾಗದಲ್ಲಿ ನೀರೊಳಗೆ 1 ನಿಮಿಷ 2 ಸೆಕೆಂಡ್ಸ್‌ನಲ್ಲಿ 28 ಪಲ್ಟಿ ಹೊಡೆದಿರುವ ದಾಖಲೆ ಮಾಡಿದ್ದರು. 15 ವರ್ಷದೊಳಗೆ ಈ ನೀರೊಳಗಿನ ಪಲ್ಟಿ ಸಾಹಸ ಪ್ರಥಮ ದಾಖಲೆ ಎನ್ನಲಾಗಿದೆ. ನೊಬೆಲ್ ವಲ್ಡ್ ರೆಕಾರ್ಡ್ಸ್‌ನ ರಾಜ್ಯ ನಿರ್ದೇಶಕ ಡಾ. ಕೃಷ್ಣಮೂರ್ತಿ ಅವರು ಈ ಸಾಧನೆಯ ಸಂದರ್ಭದಲ್ಲಿ ಹಾಜರಿದ್ದು ಬಾಲಕ ಹ್ಯಾಡ್ರಿಯನ್ ಅವರ ಪಲ್ಟಿ ಸಾಹಸವನ್ನು ದಾಖಲಿಸಿಕೊಂಡರು.
ಸ್ವಿಮ್ಮಿಂಗ್ ಕೋಚ್ ಅರೋಮಲ್ ಎ.ಎಸ್ ಮಾತನಾಡಿ, "ಸಾಮಾನ್ಯವಾಗಿ ಈಜುಕೊಳದ ಅಂಚು ಹಿಡಿದುಕೊಂಡು ಪಲ್ಟಿ ಹಾಕಲಾಗುತ್ತದೆ. ಆದರೆ ಈಜುಕೊಳದ ಮಧ್ಯ ನೀರಿನಲ್ಲಿ ಏಕಕಾಲಕ್ಕೆ 26 ಪಲ್ಟಿ ಹೊಡೆಯುವುದು ಹ್ಯಾಡ್ರಿಯನ್ ಅವರ ದಾಖಲೆಯಾಗಿದ್ದು, ಆತನಿಗೆ ತರಬೇತಿ ನೀಡಿದ ನನಗೂ ಹೆಮ್ಮೆಯ ವಿಚಾರ. ಬೇಸಿಗೆ ರಜೆಯ ವೇಳೆ ಹ್ಯಾಡ್ರಿಯನ್‌ನ ಪ್ರತಿಭೆಯನ್ನು ನೋಡಿ ಆತನಿಗೆ ವಿಶೇಷ ರೀತಿಯ ತರಬೇತಿ ನೀಡಲಾಯಿತು. ನಗರದ ಪ್ರೆಸ್ಟೀಜ್ ಅಂತಾರಾಷ್ಟ್ರೀಯ ಶಾಲೆಯ ಈಜುಕೊಳದಲ್ಲಿ ತರಬೇತಿ ನೀಡಲಾಗಿದ್ದು, ಬಳಿಕ ಎಮ್ಮೆಕೆರೆ ಈಜುಕೊಳದಲ್ಲೂ ತರಬೇತಿ ಮುಂದುವರಿಸಲಾಯಿತು. ಕಳೆದ ಸುಮಾರು 10 ತಿಂಗಳಿನಿಂದ ಆತ ತರಬೇತಿ ಪಡೆಯುತ್ತಿದ್ದಾನೆ" ಎಂದು ತಿಳಿಸಿದರು.