ಕಲಬುರಗಿ : ಕಲಬುರಗಿ ವಿಮಾನ ನಿಲ್ದಾಣ ಸ್ಫೋಟಿಸುವುದಾಗಿ ಅನಾಮಧೇಯ ವ್ಯಕ್ತಿಯಿಂದ ಬಾಂಬ್ ಬೆದರಿಕೆಯ ಇ-ಮೇಲ್ ಬಂದಿದ್ದು, ಕೆಲ ಕಾಲ ಆತಂಕ ಸೃಷ್ಟಿಯಾದ ಘಟನೆ ನಡೆದಿದೆ. ಕಂದಾಯ ಸಚಿವ ಕೃಷ್ಣ ಬೈರೇಗೌಡ ಸೇರಿದಂತೆ ಪ್ರಯಾಣಿಕರನ್ನು ವಿಮಾನ ನಿಲ್ದಾಣದಿಂದ ಹೊರಗೆ ಬಿಡದೆ ಬಾಂಬ್ ನಿಷ್ಕ್ರಿಯ ದಳ ತಪಾಸಣೆ ನಡೆಸಿತು.
ವಿಮಾನ ನಿಲ್ದಾಣದಲ್ಲಿ ಬಾಂಬ್ ಇರಿಸಲಾಗಿದೆ ಎಂದು ಏರ್ಪೋರ್ಟ್ ನಿರ್ದೇಶಕ ಚಿಲಕಾ ಮಹೇಶ ಅವರಿಗೆ ಇಂದು ಬೆಳಗ್ಗೆ 7 ಗಂಟೆಗೆ ಇ-ಮೇಲ್ ಬಂದಿದೆ. ಬಾಂಬ್ ಬೆದರಿಕೆ ಇ-ಮೇಲ್ ಬಂದಿರುವ ವಿಚಾರ ಗೊತ್ತಾಗುತ್ತಿದ್ದಂತೆ ನಿಲ್ದಾಣಕ್ಕೆ ದೌಡಾಯಿಸಿದ ಬಾಂಬ್ ನಿಷ್ಕ್ರಿಯ ದಳ, ಶ್ವಾನದಳ, ಪೊಲೀಸರು ವಿಮಾನ ನಿಲ್ದಾಣದ ಎಲ್ಲ ಸ್ಥಳಗಳಲ್ಲಿ ಮತ್ತು ಪ್ರಯಾಣಿಕರ ಬ್ಯಾಗ್ಗಳನ್ನ ಸತತ ಎರಡ್ಮೂರು ಗಂಟೆಗಳ ಕಾಲ ಪರಿಶೀಲನೆ ನಡೆಸಿದರು.
ಇದೇ ಸಂದರ್ಭದಲ್ಲಿ ಬೆಂಗಳೂರಿನಿಂದ ಕಲಬುರಗಿಗೆ ಆಗಮಿಸಿದ ವಿಮಾನದಲ್ಲಿದ್ದ ಸಚಿವ ಕೃಷ್ಣ ಬೈರೇಗೌಡ ಸೇರಿದಂತೆ ಎಲ್ಲ ಪ್ರಯಾಣಿಕರನ್ನು ಸುರಕ್ಷತೆ ದೃಷ್ಟಿಯಿಂದ ಕೆಳಗೆ ಇಳಿಯಲು ಬಿಡದೆ ನಿಲ್ದಾಣದಲ್ಲಿ ತಪಾಸಣೆ ಕಾರ್ಯ ಮುಂದುವರೆಸಿದ್ರು. ಆದ್ರೆ ಯಾವುದೇ ಬಾಂಬ್ ಪತ್ತೆಯಾಗಲಿಲ್ಲ. ಇದೊಂದು ಹುಸಿ ಬಾಂಬ್ ಬೆದರಿಕೆ ಇ-ಮೇಲ್ ಅನ್ನೋದು ಗೊತ್ತಾಗಿದೆ. ಆದ್ರೆ ಇ-ಮೇಲ್ ಕಳುಹಿಸಿದವರ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.