ವಿಜಯಪುರ: ಜಿಲ್ಲೆಯ ಬಬಲೇಶ್ವರ ತಾಲೂಕಿನ ಕೃಷ್ಣಾನಗರದಲ್ಲಿರುವ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ಮತ್ತೆ ಬಾಯ್ಲರ್ ಸ್ಫೋಟಗೊಂಡಿದ್ದು, ಕಾರ್ಮಿಕರು ಅಪಾಯದಿಂದ ಪಾರಾಗಿದ್ದಾರೆ.
ಭಾನುವಾರ ನಸುಕಿನ ಜಾವ 15 ಕಾರ್ಮಿಕರು ಚಹಾ ಕುಡಿಯಲು ತೆರಳಿದ್ದಾಗ ಘಟನೆ ನಡೆಯಿತು ಎಂದು ತಿಳಿದುಬಂದಿದೆ. ಇದರಿಂದಾಗಿ ಸಂಭಾವ್ಯ ಅನಾಹುತ ತಪ್ಪಿದೆ. ಮುಂದಿನ ಹಂಗಾಮಿಗಾಗಿ ಕಬ್ಬು ನುರಿಸಲು ಕಾರ್ಖಾನೆ ಸಿದ್ಧತೆ ನಡೆಸುತ್ತಿತ್ತು.
ಸ್ಫೋಟಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ. ಆದರೆ ಕಳಪೆ ಬಾಯ್ಲರ್ ನಿರ್ಮಾಣವೇ ಅವಘಡಕ್ಕೆ ಕಾರಣ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
2023ರ ಮಾರ್ಚ್ 4ರಂದು ಬಾಯ್ಲರ್ ಸ್ಫೋಟಗೊಂಡು, ಓರ್ವ ಕಾರ್ಮಿಕ ಮೃತಪಟ್ಟು ನಾಲ್ವರಿಗೆ ಸುಟ್ಟ ಗಾಯಗಳಾಗಿದ್ದವು. ಎಲ್ಲರೂ ಉತ್ತರ ಭಾರತದ ಕಾರ್ಮಿಕರಾಗಿದ್ದರು.
ಈ ಹಿಂದಿನ ಆಡಳಿತ ಮಂಡಳಿ ಕಳಪೆ ಗುಣಮಟ್ಟದ ಬಾಯ್ಲರ್ ನಿರ್ಮಿಸಿದ್ದೇ ಇಂಥ ಘಟನೆಗಳಿಗೆ ಕಾರಣ ಎಂಬ ಆರೋಪವಿದೆ. 50 ಕೋಟಿ ರೂಪಾಯಿ ವೆಚ್ಚದಲ್ಲಿ ಮಹಾರಾಷ್ಟ್ರದ ಪೂನಾ ಮೂಲದ ಎಸ್‌ಎಸ್ ಇಂಜಿನಿಯರಿಂಗ್ ಸಂಸ್ಥೆ ಬಾಯ್ಲರ್ ನಿರ್ಮಾಣ ಕಾಮಗಾರಿ ನಡೆಸಿತ್ತು. ಇದು ಕಳಪೆಯಾಗಿದೆ ಎಂದು ಆರೋಪಿಸಿರುವ ರೈತರು, ಈ ಕುರಿತು ಉನ್ನತ ಮಟ್ಟದ ತನಿಖೆಗೆ ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಗುಜರಾತ್ನಲ್ಲಿ ಬಹುಮಹಡಿ ಕಟ್ಟಡ ಕುಸಿತ ಪ್ರಕರಣ: ಸಾವಿನ ಸಂಖ್ಯೆ ಏಳಕ್ಕೆ ಏರಿಕೆ - Gujarat Building Collapse