ಕರ್ನಾಟಕ

karnataka

ETV Bharat / state

ಹಳೆ ಬಸ್‌ಗಳನ್ನು ಬಳಸಿಕೊಂಡು ಭೋಜನ ಬಂಡಿಗಳ ನಿರ್ಮಾಣಕ್ಕೆ ಮುಂದಾದ ಬಿಎಂಟಿಸಿ

ಯಶವಂತಪುರ ಡಿಪೋದಲ್ಲಿ ಹಳೆ ಬಸ್​ನಿಂದ ತಯಾರಿಸಲಾದ ಭೋಜನ ಬಂಡಿಯನ್ನು ಬಳಸಿಕೊಳ್ಳಲಾಗುತ್ತಿದೆ.

ಹಳೆ ಬಸ್​ನಿಂದ ತಯಾರಿಸಲಾದ ಭೋಜನ ಬಂಡಿ
ಹಳೆ ಬಸ್​ನಿಂದ ತಯಾರಿಸಲಾದ ಭೋಜನ ಬಂಡಿ

By ETV Bharat Karnataka Team

Published : Feb 22, 2024, 10:36 PM IST

ಬೆಂಗಳೂರು : ಹಳೆ ಬಸ್‌ಗಳನ್ನು ಬಳಸಿಕೊಂಡು ಭೋಜನ ಬಂಡಿಗಳ ನಿರ್ಮಾಣಕ್ಕೆ ಬಿಎಂಟಿಸಿ ಮುಂದಾಗಿದ್ದು, ಇವುಗಳನ್ನು ಡಿಪೋಗಳಲ್ಲಿ ಅಳವಡಿಸಲು ನಿರ್ಧರಿಸಲಾಗಿದೆ. ಸದ್ಯ ಒಂದು ಭೋಜನಬಂಡಿ ನಿರ್ಮಾಣ ಮಾಡಲಾಗಿದ್ದು, ಯಶವಂತಪುರ ಅಥವಾ ಪೀಣ್ಯ ಡಿಪೋದಲ್ಲಿ ಈ ಭೋಜನ ಬಂಡಿಯನ್ನು ಬಳಸಿಕೊಳ್ಳಲಾಗುತ್ತಿದೆ.

ಹಳೆ ಬಸ್​ನಿಂದ ತಯಾರಿಸಲಾದ ಭೋಜನ ಬಂಡಿ

ಈ ಬಸ್ ಬಿಎಂಟಿಸಿ ಉತ್ತರ ವಲಯದಲ್ಲಿ 10 ಲಕ್ಷ ಕಿಲೋ ಮೀಟರ್ ಸಂಚರಿಸಿದೆ. ಕಾರ್ಯ ಸ್ಥಗಿತಗೊಳಿಸಿರುವ ಬಸ್​ ಅನ್ನು ಕಾರ್ಯಾಗಾರ-4ರ ಸಹಾಯಕ ತಾಂತ್ರಿಕ ಎಂಜಿನಿಯರ್ ಆರ್. ಆನಂದಕುಮಾರ್ ಮತ್ತು ತಾಂತ್ರಿಕ ಸಹಾಯಕರು ಕ್ಯಾಂಟೀನ್ ಆಗಿ ಪರಿವರ್ತಿಸಿದ್ದಾರೆ.

ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರು, ಕೇಂದ್ರ ಕಚೇರಿಯ ಮುಖ್ಯ ತಾಂತ್ರಿಕ ಎಂಜಿನಿಯರ್, ಕೇಂದ್ರೀಯ ಕಾರ್ಯಾಗಾರದ ವ್ಯವಸ್ಥಾಪಕರ ಮಾರ್ಗದರ್ಶನದಲ್ಲಿ ಈ ಬಸ್ ಕ್ಯಾಂಟೀನ್ ಆರಂಭಿಸಲಾಗಿದೆ. ಈ ಬಸ್‌ಗಳನ್ನು ಭೋಜನ ಬಂಡಿ ಎಂದು ಕರೆಯಲಾಗುವುದು ಎಂದು ನಗರ ಸಾರಿಗೆ ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ.

ಹಳೆ ಬಸ್​ನಿಂದ ತಯಾರಿಸಲಾದ ಭೋಜನ ಬಂಡಿ

ಈ ಬಸ್ ಕ್ಯಾಂಟೀನ್ ಅನ್ನು ನಿಗಮದ ಸಿಬ್ಬಂದಿಗಾಗಿ ನಿರ್ಮಾಣ ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ಅಭಿವೃದ್ಧಿಪಡಿಸಿ ಸಾರ್ವಜನಿಕರ ಅನುಕೂಲಕ್ಕಾಗಿ ಬಳಸಲಾಗುವುದು. ಬಸ್ ಎರಡೂ ಕಡೆಯಲ್ಲೂ "ಭೋಜನ ಬಂಡಿ- ಬನ್ನಿ ಕುಳಿತು ಊಟ ಮಾಡೋಣ" ಎನ್ನುವ ಘೋಷವಾಕ್ಯಗಳನ್ನು ಬರೆಯಲಾಗಿದೆ. ಇನ್ನು ಬಸ್ ಒಳಗಿನ ಸೀಟ್‌ಗಳನ್ನು ತೆಗೆದು ಟೇಬಲ್ ಮತ್ತು ಆಸನಗಳನ್ನಾಗಿ ತಯಾರು ಮಾಡಲಾಗಿದೆ ಎಂದು ಹೇಳಿದ್ದಾರೆ.

ನಗರದಲ್ಲಿ 19 ಬಿಎಂಟಿಸಿ ಡಿಪೋಗಳು ಕಾರ್ಯನಿರ್ವಹಿಸುತ್ತಿವೆ. ಕೆಲವು ಕಡೆಗಳಲ್ಲಿ ಕ್ಯಾಂಟೀನ್​ಗಳಿವೆ. ಹಲವು ಕಡೆಗಳು ಇಲ್ಲ. ಕಾರ್ಯಾಚರಣೆ ನಿಲ್ಲಿಸಿರುವ ಬಸ್‌ಗಳನ್ನು ಕ್ಯಾಂಟೀನ್ ಆಗಿ ಪರಿವರ್ತಿಸಿ 17 ಡಿಪೋಗಳಲ್ಲಿ ಅಳವಡಿಸುವ ಯೋಜನೆ ಇದಾಗಿದೆ. ಸದ್ಯ ಒಂದು ಕ್ಯಾಂಟೀನ್ ತಯಾರಾಗಿದೆ ಎಂದು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ಆರ್ ರಾಮಚಂದ್ರನ್ ತಿಳಿಸಿದ್ದಾರೆ.

ಈ ಬಸ್ ಕ್ಯಾಂಟೀನ್​ನಲ್ಲಿ ಕೈತೊಳೆಯುವ ಬೇಸಿನ್ ಇದೆ. ಕುಡಿಯುವ ನೀರಿನ ವ್ಯವಸ್ಥೆ, ಫ್ಯಾನ್‌ಗಳ ವ್ಯವಸ್ಥೆ ಮಾಡಲಾಗಿದೆ. ಬೆಳಕಿಗಾಗಿ ಚಾವಣಿಯಲ್ಲಿ ಗಾಜಿನ ಕಿಟಕಿಯನ್ನು ಅಳವಡಿಸಲಾಗಿದೆ. ಗಾಳಿ, ಬೆಳಕಿಗಾಗಿ ಬಸ್‌ನ ಎರಡೂ ಕಡೆಗಳಲ್ಲಿ ಕಿಟಕಿಗಳನ್ನು ಇಡಲಾಗಿದೆ. ಬಸ್ ಚಾವಣಿಯ ಮೇಲೆ ನೀರಿನ ಟ್ಯಾಂಕ್ ಜೋಡಿಸಲಾಗಿದೆ. ಹೋಟೆಲ್‌ಗಳಲ್ಲಿ ಇರುವ ಎಲ್ಲ ಸೌಲಭ್ಯಗಳು ಈ ಭೋಜನ ಬಂಡಿಯಲ್ಲಿವೆ ಎಂದು ರಾಮಚಂದ್ರನ್ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ :ಇಂದಿರಾ ಕ್ಯಾಂಟೀನ್​ಗಳಿಗೆ ಆಹಾರ ಪೂರೈಕೆ ಟೆಂಡರ್​ ವಿಳಂಬ: ಏಪ್ರಿಲ್​ ಬಳಿಕವೇ ಹೊಸ ಮೆನು ಲಭ್ಯ

ABOUT THE AUTHOR

...view details