ಬೆಂಗಳೂರು:ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ)ಯ ಬಸ್ ಹರಿದು ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಶನಿವಾರ ರಾತ್ರಿ ಬೆಂಗಳೂರಿನ ನಾಯಂಡಹಳ್ಳಿ ಬಳಿಯ ಪಂತರಪಾಳ್ಯದಲ್ಲಿ ನಡೆದಿದೆ. ಕಾಮಾಕ್ಷಿಪಾಳ್ಯದ ನಿವಾಸಿ ಸರೋಜ (42) ಮೃತ ದುರ್ದೈವಿ.
ರಾತ್ರಿ 9.45ರ ಸುಮಾರಿಗೆ ಸಹೋದರನ ಸ್ಕೂಟರ್‌ನಲ್ಲಿ ಹೋಗುತ್ತಿದ್ದಾಗ ಕೆಳಗೆ ಬಿದ್ದ ಸರೋಜಾ ಮೇಲೆ ಬಸ್ ಹರಿದಿದೆ.
ಜ್ಞಾನಭಾರತಿಯಲ್ಲಿ ಸಂಬಂಧಿಕರೊಬ್ಬರ ಮದುವೆ ಮುಗಿಸಿಕೊಂಡು ಸರೋಜ ಹಾಗೂ ಅವರ ಸಹೋದರ ಸ್ಕೂಟರ್‌ನಲ್ಲಿ ತೆರಳುತ್ತಿದ್ದರು. ಪಂತರಪಾಳ್ಯದ ಪೂರ್ಣಿಮಾ ಟಿಂಬರ್ಸ್ ಮುಂಭಾಗದ ರಸ್ತೆಯಲ್ಲಿ ನಿಂತಿದ್ದ ಕಾರಿನಲ್ಲಿದ್ದ ಚಾಲಕ ಅಜಾಗರೂಕತೆಯಿಂದ ಏಕಾಏಕಿ ಬಾಗಿಲು ತೆರೆದಿದ್ದಾನೆ. ಇದರಿಂದ, ಕಾರಿನ ಬಾಗಿಲಿಗೆ ಸ್ಕೂಟರ್ ಡಿಕ್ಕಿಯಾಗಿ ಸರೋಜ ಹಾಗೂ ಅವರ ಸಹೋದರ ರಸ್ತೆ ಮೇಲೆ ಬಿದ್ದಿದ್ದಾರೆ. ಅದೇ ಸಂದರ್ಭದಲ್ಲಿ ರಸ್ತೆಯ ಬಲಭಾಗದಲ್ಲಿ ಬರುತ್ತಿದ್ದ ಬಿಎಂಟಿಸಿ ಬಸ್‌ನ ಹಿಂಬದಿ ಚಕ್ರಗಳು ಸರೋಜ ಅವರ ತಲೆ ಮೇಲೆ ಹರಿದಿದೆ. ಪರಿಣಾಮ ಸರೋಜ ಸ್ಥಳದಲ್ಲೇ ಮೃತಪಟ್ಟಿದ್ದಾರೆ.