ಬೆಂಗಳೂರು: ಬಸ್‌ನಲ್ಲಿ ಮಹಿಳೆ ಮೇಲೆ ಹಲ್ಲೆ ನಡೆಸಿರುವ ಆರೋಪದಡಿ ಬಂಧಿತನಾಗಿದ್ದ ಬಿಎಂಟಿಸಿ ನಿರ್ವಾಹಕ ಹೊನ್ನಪ್ಪ ಅಗಸರ್ ದೂರುದಾರ ಮಹಿಳೆ ತಂಜಿಲಾ ವಿರುದ್ಧ ಪ್ರತಿದೂರು ನೀಡಿದ್ದು, ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣದಲ್ಲಿ ಜಾಮೀನು ಪಡೆದ ಬಳಿಕ ನಿರ್ವಾಹಕ ಹೊನ್ನಪ್ಪ ಪೊಲೀಸ್ ಠಾಣಾ ಮೆಟ್ಟಿಲೇರಿದ್ದಾರೆ.
ದೂರಿನ ಸಾರಾಂಶ:ಮಾರ್ಚ್ 26ರಂದು ಬಿಳೇಕಹಳ್ಳಿಯಲ್ಲಿ ಬಸ್ ಹತ್ತಿದ್ದ ಆರೋಪಿ ಮಹಿಳೆ ಉಚಿತ ಟಿಕೆಟ್ ಪಡೆಯಲು ಆಧಾರ್ ಕಾರ್ಡ್ ತೋರಿಸಿರಲಿಲ್ಲ. ಮತ್ತೊಂದೆಡೆ ಹಣ ನೀಡಿಯೂ ಟಿಕೆಟ್ ಪಡೆದಿರಲಿಲ್ಲ. ಬಸ್ ಡೈರಿ ಸರ್ಕಲ್ ಬಳಿ ಬಂದಾಗ ಪುನಃ ಮತ್ತೊಮ್ಮೆ ಮಹಿಳೆಯನ್ನು ನಾನು ವಿಚಾರಿಸಿದಾಗ ಅವಾಚ್ಯವಾಗಿ ಹಿಂದಿ ಭಾಷೆಯಲ್ಲಿ ನಿಂದಿಸಲಾರಂಭಿಸಿದ್ದರು. ಅಲ್ಲದೇ ನನ್ನ ಸಮವಸ್ತ್ರ ಹಿಡಿದು ಎಳೆದಾಡಿ ಹಲ್ಲೆ ಮಾಡಿದ್ದಾರೆ. ನನ್ನ ರಕ್ಷಣೆಗಾಗಿ ನಾನು ಆಕೆಯನ್ನು ತಳ್ಳಿರುತ್ತೇನೆ. ನಡೆದ ವಿಚಾರವನ್ನು ಡಿಪೋ ಮ್ಯಾನೇಜರ್ ಅವರಿಗೆ ಕರೆ ಮಾಡಿ ತಿಳಿಸಿದ್ದೇನೆ ಕೂಡಾ, ಇತರ ಪ್ರಯಾಣಿಕರಿಗೆ ತೊಂದರೆಯಾಗಬಾರದು ಎಂಬ ಕಾರಣಕ್ಕೆ ನಾನು ನನ್ನ ಕರ್ತವ್ಯ ಮುಂದುವರೆಸಿರುತ್ತೇನೆ.
ಅದೇ ದಿನ ಆರೋಪಿ ಮಹಿಳೆ ನೀಡಿರುವ ದೂರಿನ ಅನ್ವಯ ಪೊಲೀಸರು ನನ್ನನ್ನು ದಸ್ತಗಿರಿ ಮಾಡಿ ನ್ಯಾಯಾಲಯದ ಮುಂದೆ ಹಾಜರುಪಡಿಸಿರುತ್ತಾರೆ. ಜಾಮೀನು ಪಡೆದ ಬಳಿಕ ದೂರು ನೀಡುತ್ತಿದ್ದು, ಸಾರ್ವಜನಿಕ ಕರ್ತವ್ಯಕ್ಕೆ ಅಡ್ಡಿಪಡಿಸಿ, ಹಲ್ಲೆ ಮಾಡಿ ಅವಾಚ್ಯವಾಗಿ ನಿಂದಿಸಿರುವ ಆರೋಪಿ ವಿರುದ್ಧ ಕ್ರಮ ಕೈಗೊಳ್ಳುವಂತೆ ತಮ್ಮ ದೂರಿನಲ್ಲಿ ಹೊನ್ನಪ್ಪ ಉಲ್ಲೇಖಿಸಿದ್ದಾರೆ.