ಬೆಂಗಳೂರು: ನಮ್ಮ ಮೆಟ್ರೋ ಸಂಸ್ಥೆ 2025ರ ಹೊಸ ವರ್ಷದ ಅಂಗವಾಗಿ ರೈಲಿನ ಸೇವಾವಧಿಯನ್ನು ವಿಸ್ತರಿಸಿದೆ. ನೇರಳೆ ಮತ್ತು ಹಸಿರು ಮಾರ್ಗಗಳಲ್ಲಿ ಕೊನೆಯ ರೈಲು ಜನವರಿ 1ರಂದು ಮುಂಜಾನೆ 2 ಗಂಟೆಗೆ ಎಲ್ಲ ಟರ್ಮಿನಲ್ ನಿಲ್ದಾಣಗಳಿಂದ ಹೊರಡಲಿದೆ. ನಾಡಪ್ರಭು ಕೆಂಪೇಗೌಡ ಮೆಟ್ರೋ ನಿಲ್ದಾಣ(ಮೆಜೆಸ್ಟಿಕ್)ನಿಂದ ಕೊನೆಯ ರೈಲುಗಳು ಎಲ್ಲ ನಾಲ್ಕು ದಿಕ್ಕುಗಳಿಗೆ ಮುಂಜಾನೆ 2.40ಕ್ಕೆ ಗಂಟೆಗೆ ಹೋರಡಲಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ತಿಳಿಸಿದೆ.
ರೈಲುಗಳು ಡಿಸೆಂಬರ್ 31ರ ರಾತ್ರಿ 11ರಿಂದ ಜನವರಿ 1ರ ಮುಂಜಾನೆ 2 ಗಂಟೆಯವರೆಗೆ 10 ನಿಮಿಷಗಳ ಮಧ್ಯಂತರದಲ್ಲಿ ಕಾರ್ಯನಿರ್ವಹಿಸಲಿವೆ. ಆದರೆ ಎಂ.ಜಿ.ರಸ್ತೆಯಲ್ಲಿ ಜನಸಂದಣಿ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ವರ್ಷದ ಕೊನೆಯ ದಿನದ ರಾತ್ರಿ 11 ಗಂಟೆಯಿಂದ ಎಂ.ಜಿ.ರಸ್ತೆ ಮೆಟ್ರೋ ನಿಲ್ದಾಣದ ದ್ವಾರಗಳನ್ನು ಮುಚ್ಚಲಾಗುತ್ತದೆ. ಪ್ರಯಾಣಿಕರ ಬಳಕೆಗಾಗಿ ಹತ್ತಿರದ ನಿಲ್ದಾಣಗಳಾದ ಟ್ರಿನಿಟಿ ಮತ್ತು ಕಬ್ಬನ್ ಪಾರ್ಕ್ನಲ್ಲಿ ರೈಲುಗಳು ನಿಲ್ಲಲಿವೆ ಎಂದು ಮಾಹಿತಿ ನೀಡಿದೆ.