ಕರ್ನಾಟಕ

karnataka

ETV Bharat / state

ಹಾಸನ: ಕಳೆದ ಎರಡು ದಿನಗಳಲ್ಲಿ ಒಂದೇ ಶಾಲೆಗೆ ಎರಡು ಬಾರಿ ವಾಮಾಚಾರ! - BLACK MAGIC

ಹಾಸನದ ಮುದುಡಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ವಾಮಾಚಾರ ಮಾಡಿರುವ ಅನುಮಾನ ವ್ಯಕ್ತವಾಗಿದ್ದು, ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಪೋಷಕರು ಮೀನಮೇಷ ಎಣಿಸುತ್ತಿದ್ದಾರೆ.

BLACK MAGIC IN GOVERNMENT SCHOOL
ಒಂದೇ ಶಾಲೆಗೆ ಎರಡು ಬಾರಿ ವಾಮಾಚಾರ (ETV Bharat)

By ETV Bharat Karnataka Team

Published : Jan 17, 2025, 8:02 PM IST

ಹಾಸನ:ಕಳೆದ ಎರಡು ದಿನಗಳಲ್ಲಿ ಒಂದೇ ಶಾಲೆಗೆ ಎರಡು ಬಾರಿ ವಾಮಾಚಾರ ಮಾಡಿಸುವ ಮೂಲಕ ಕಿಡಿಗೇಡಿಗಳು ಪುಟ್ಟ-ಪುಟ್ಟ ಮಕ್ಕಳನ್ನು ಆತಂಕಕ್ಕೆ ದೂಡಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿರುವ ಘಟನೆ ಜಿಲ್ಲೆಯ ಅರಸೀಕೆರೆ ತಾಲೂಕಿನಲ್ಲಿ ನಡೆದಿದೆ.

ತಾಲೂಕಿನ ಮುದುಡಿ ಸರ್ಕಾರಿ ಪ್ರೌಢಶಾಲೆಯಲ್ಲಿ ಇಂತಹುದೊಂದು ಘಟನೆ ನಡೆದಿದ್ದು, ಶಾಲೆಯ ಶಿಕ್ಷಕರು, ಮಕ್ಕಳುಗಳು ಅಷ್ಟೆ ಅಲ್ಲದೇ, ಸುತ್ತಮುತ್ತಲಿನ ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದಾರೆ. ವಾಮಾಚಾರ ನಡೆದಿರುವ ಸುದ್ದಿ ತಿಳಿಯುತ್ತಿದ್ದಂತೆ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಪೋಷಕರು ಹಿಂದೆ-ಮುಂದೆ ನೋಡುತ್ತಿದ್ದಾರೆ.

ಒಂದೇ ಶಾಲೆಗೆ ಎರಡು ಬಾರಿ ವಾಮಾಚಾರ (ETV Bharat)

ಕಳೆದ ಎರಡು ದಿನಗಳ ಹಿಂದೆ ಶಾಲೆಯ ಎದುರು ವಾಮಾಚಾರ ಮಾಡಲಾಗಿತ್ತು ಎಂಬ ಆರೋಪಗಳಿವೆ. ಆದ್ರೆ ಮತ್ತೆ ಗುರುವಾರ ರಾತ್ರಿ 9ನೇ ತರಗತಿ ಕೊಠಡಿಗೆ ಕಿಡಿಗೇಡಿಗಳು ಮಾಟ-ಮಂತ್ರವನ್ನು ಮಾಡಿಸಿದ್ದಾರೆ ಎನ್ನುತ್ತಾರೆ ಸ್ಥಳೀಯರು. ಇಂದು ಬೆಳಗ್ಗೆ ಶಿಕ್ಷಕರು ಬಂದು ಶಾಲೆಯ ಬೀಗ ತೆಗೆಯಲು ಮುಂದಾದಾಗ ದೃಶ್ಯ ಕಂಡು ನಿಬ್ಬೆರಗಾಗಿದ್ದಾರೆ.

''ಶಾಲಾ ಕೊಠಡಿಯ ಬಾಗಿಲಿಗೆ ಹಸಿ ನೂಲು ಕಟ್ಟಲಾಗಿದ್ದು, ಅರಿಶಿನ, ಕುಂಕುಮ, ಬಾಳೆಹಣ್ಣು, ತೆಂಗಿನಕಾಯಿ ಮುಂತಾದ ಪೂಜಾ ಸಾಮಗ್ರಿಗಳನ್ನು ಇಡಲಾಗಿದೆ. ಬುಧವಾರ ರಾತ್ರಿ ಕೂಡ ಶಾಲೆಯ ಆವರಣದಲ್ಲಿ ತೆಂಗಿನಗರಿ ಚಪ್ಪರ ಹಾಕಿ ಗೊಂಬೆ ಮುರಿದಿದ್ದು ಕಂಡು ಬಂದಿದ್ದು, ಯಾರೋ ವಾಮಾಚಾರ ನಡೆಸಿರುವ ಅನುಮಾನ ವ್ಯಕ್ತವಾಗಿದೆ'' ಎಂದು ಗ್ರಾಮಸ್ಥ ಯೋಗೇಶ್ ಎಂಬುವರು ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.

ಒಂದೇ ಶಾಲೆಗೆ ಎರಡು ಬಾರಿ ವಾಮಾಚಾರ (ETV Bharat)

ಮಕ್ಕಳಲ್ಲಿ ಆತಂಕ:ಶಾಲೆಯು ಸುಮಾರು 70 ವಿದ್ಯಾರ್ಥಿಗಳನ್ನು ಹೊಂದಿದ್ದು, ಈ ಘಟನೆಯಿಂದ ಮಕ್ಕಳು ಹಾಗೂ ಪೋಷಕರು ಭಯಭೀತರಾಗಿದ್ದಾರೆ. ವಾಮಾಚಾರದ ದೃಶ್ಯಗಳನ್ನು ಕಂಡು ಮಕ್ಕಳು ಹೆಚ್ಚಿನ ಚಿಂತೆಯಲ್ಲಿದ್ದಾರೆ ಎನ್ನುತ್ತಾರ ಶಿಕ್ಷಕರು.

ಒಂದೇ ಶಾಲೆಗೆ ಎರಡು ಬಾರಿ ವಾಮಾಚಾರ (ETV Bharat)

ಈ ಬಗ್ಗೆ ಶಾಲೆಯ ಮುಖ್ಯೋಪಾಧ್ಯಾಯರು ಈ ಕುರಿತು ಸ್ಥಳೀಯ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದು, ಅರಸೀಕೆರೆ ಬಿಇಒ ಗಮನಕ್ಕೂ ತಂದಿದ್ದಾರೆ. ಈ ಘಟನೆ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರನ್ನು ಬಂಧಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ:ಬಳ್ಳಾರಿ: ತಲೆ ಬುರುಡೆ ಇಟ್ಟು ವಾಮಾಚಾರ, ಬೆಚ್ಚಿಬಿದ್ದ ಏರಿಯಾ ನಿವಾಸಿಗಳು - BLACK MAGIC

ABOUT THE AUTHOR

...view details