ಹುಬ್ಬಳ್ಳಿ :ಪ್ರಧಾನಮಂತ್ರಿ ನರೇಂದ್ರ ಮೋದಿಯವರು ತಾವು ಮಾಡಿದ ಸಾಧನೆ ಬಗ್ಗೆ ಹೇಳಲಿಕ್ಕೆ ಆಗೋಲ್ಲ. ಆದ್ದರಿಂದ ಧರ್ಮಗಳ ಮೇಲೆ ಚುನಾವಣೆ ಮಾಡಲು ಹೊರಟಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಬಿ. ಕೆ ಹರಿಪ್ರಸಾದ್ ಅವರು ವಾಗ್ದಾಳಿ ನಡೆಸಿದರು.
ನಗರದಲ್ಲಿಂದು ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಬಿಜೆಪಿಯವರು ದೇಶದಲ್ಲಿ ಹಿಂದೂಗಳು ಅಪಾಯದಲ್ಲಿದ್ದಾರೆ ಎಂದು ಪದೇ ಪದೇ ಹೇಳಿಕೆ ನೀಡುತ್ತಾರೆ. ದೇಶದಲ್ಲಿ ಯಾವ ಹಿಂದೂಗಳು ಅಪಾಯದಲ್ಲಿಲ್ಲ, ಮುಸ್ಲಿಮರೂ ಅಪಾಯದಲ್ಲಿಲ್ಲ. ಅಪಾಯವಿರುವುದು ಬಿಜೆಪಿ ಎಂದು ಹರಿಹಾಯ್ದರು.
ಮೋದಿಯವರು ಸಂವಿಧಾನ ಧರ್ಮ ಗ್ರಂಥ ಎಂದು ಜಾಹೀರಾತುಗಳನ್ನು ಕೊಟ್ಟಿದ್ದಾರೆ. ಮುಸ್ಲಿಂ ಸಮುದಾಯಕ್ಕೆ ಎಸ್. ಸಿ, ಎಸ್. ಟಿ ಮೀಸಲಾತಿ ಕೊಡುವುದಿಲ್ಲ ಎಂದು ಹೇಳಿದ್ದಾರೆ. ಅವರೊಬ್ಬ ಸುಳ್ಳಿನ ಸರ್ದಾರ ಎಂದು ಟೀಕಿಸಿದರು.
ಮೋದಿಯವರು ಮುಂದಿನ 5 ವರ್ಷಗಳ ಕಾಲ ಏನು ಮಾಡುತ್ತೇವೆಂದು ಪ್ರಣಾಳಿಕೆಯಲ್ಲಿ ಏಕೆ ಹೇಳಿಲ್ಲ?. ಈ ಹಿಂದೆ ಏನು ಮಾಡಿದ್ದೇವೆಂದು ಸಹ ಹಾಕಿಲ್ಲ. ಬಿಜೆಪಿ ಪಕ್ಷದ ಪ್ರಣಾಳಿಕೆಯಲ್ಲಿ ಟೊಳ್ಳು ಭರವಸೆಗಳು ಇವೆ. ಅವರದು ಇದು ಅಮೃತ ಕಾಲ ಅಲ್ಲ, ಅನ್ಯಾಯದ ಕಾಲ ಎಂದು ಕಿಡಿಕಾರಿದ ಅವರು, 5 ನ್ಯಾಯ ಪತ್ರಗಳನ್ನು ನಾವು ಬಿಡುಗಡೆ ಮಾಡಿದ್ದೇವೆ. 10 ವರ್ಷಗಳಲ್ಲಿ ಮೋದಿ ಒಂದೇ ಒಂದು ಸತ್ಯವನ್ನು ಜನರಿಗೆ ಹೇಳಿಲ್ಲ. ಅವರ ಹೇಳಿಕೆಯಲ್ಲಿ ಸಾಕಷ್ಟು ದ್ವಂದ್ವ ಇದೆ ಎಂದರು.