ಕರ್ನಾಟಕ

karnataka

ಜೂ.28ರಂದು ರಾಜ್ಯದ ಎಲ್ಲಾ ಜಿಲ್ಲಾಧಿಕಾರಿ ಕಚೇರಿಗಳಿಗೆ ಬಿಜೆಪಿ ಮುತ್ತಿಗೆ: ಬಿ.ವೈ.ವಿಜಯೇಂದ್ರ - B Y Vijayendra

By ETV Bharat Karnataka Team

Published : Jun 26, 2024, 5:52 PM IST

ವಾಲ್ಮೀಕಿ ನಿಗಮ ಹಗರಣದ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮಾತನಾಡಿದ್ದು, ರಾಜ್ಯದ ಎಲ್ಲಾ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕುವ ಕುರಿತು ಮಾಹಿತಿ ನೀಡಿದ್ದಾರೆ.

bjp-state-president-b-y-vijayendra
ಬಿ.ವೈ.ವಿಜಯೇಂದ್ರ (ETV Bharat)

ಬೆಂಗಳೂರು/ನವದೆಹಲಿ: ವಾಲ್ಮೀಕಿ ಅಭಿವೃದ್ಧಿ ನಿಗಮದ 187 ಕೋಟಿ ರೂ. ಹಗರಣ ಸಂಬಂಧ ಹಣಕಾಸು ಸಚಿವರಾದ ಮುಖ್ಯಮಂತ್ರಿ ಜವಾಬ್ದಾರಿ ಹೊರಬೇಕು. ಈ ಸಂಬಂಧ ಶರಣಪ್ರಕಾಶ್ ಪಾಟೀಲ್, ನಿಗಮದ ಅಧ್ಯಕ್ಷರು ಕೂಡಲೇ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಆಗ್ರಹಿಸಿದರು.

ದೆಹಲಿಯಲ್ಲಿ ಇಂದು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಇದೇ (ಜೂನ್) 28ರಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲಿದ್ದೇವೆ. ಪರಿಶಿಷ್ಟ ಪಂಗಡಕ್ಕೆ ಮೀಸಲಿಟ್ಟ ಹಣ ದುರ್ಬಳಕೆಯಾಗಿದೆ. ಕಾಂಗ್ರೆಸ್ ಸರ್ಕಾರ ಈ ಹಣ ದೋಚಿದೆ ಎಂದು ಆರೋಪಿಸಿದರು.

ರಾಜ್ಯ ಕಾಂಗ್ರೆಸ್ ಸರ್ಕಾರ ಜನರಿಗೆ ಶಾಪವಾಗಿ ಪರಿಣಮಿಸಿದೆ. ನಿಗಮದ ಹಗರಣ ಸಂಬಂಧ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಪತ್ರದನ್ವಯ ಸಿಬಿಐ ತನಿಖೆ ನಡೆಯುತ್ತಿದೆ. ರಾಜ್ಯ ಸರ್ಕಾರ ಆತುರಾತುರವಾಗಿ ಎಸ್‍ಐಟಿಯನ್ನೂ ರಚಿಸಿ ತಮಗೆ ಬೇಕಾದಂತೆ ತನಿಖೆ ನಡೆಸುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ಎಸ್‍ಐಟಿ ತೇಪೆ ಹಚ್ಚುವ ಕೆಲಸ ಮಾಡುತ್ತಿದೆ. ಯಾವುದೋ ಅಧಿಕಾರಿ ಮನೆಯಲ್ಲಿ 10 ಕೋಟಿ ರೂ ಸಿಗ್ತು, ಇನ್ನೊಂದೆಡೆ 5 ಕೋಟಿ ರೂ ಸಿಗ್ತು ಎನ್ನುವ ಮೂಲಕ ಕಣ್ಣೊರೆಸುವ ತಂತ್ರವನ್ನು ಸರ್ಕಾರ ಎಸ್‌ಐಟಿ ಮೂಲಕ ಮಾಡಿಸುತ್ತಿದೆ ಎಂದು ದೂರಿದರು.

ಸಚಿವ ನಾಗೇಂದ್ರ ರಾಜೀನಾಮೆ ಕೊಟ್ಟಿದ್ದಾರೆ. ತೆಲಂಗಾಣಕ್ಕೆ ಬೇನಾಮಿ ಖಾತೆಗೆ ಹಣ ವರ್ಗಾವಣೆ ಮಾಡಿ ವಿತ್‍ಡ್ರಾ ಮಾಡಿದ್ದಾರೆ. ಈ ಹಣವನ್ನು ಲೋಕಸಭಾ ಚುನಾವಣೆಗೆ ಬಳಸಿದ್ದಾರೆ ಎಂದೂ ಇದೇ ವೇಳೆ ಆರೋಪಿಸಿದರು.

ಈ ಹಿಂದೆಯೂ ಕಾಂಗ್ರೆಸ್ ಸರ್ಕಾರ ಇದ್ದಾಗ ಇಂಥ ಅನೇಕ ಹಗರಣಗಳನ್ನು ಅವರದೇ ಎಸಿಬಿ ಮೂಲಕ ಮುಚ್ಚಿ ಹಾಕಿದ್ದರು ಎಂದರು. ನಾವು ಹೋರಾಟವನ್ನು ಇಲ್ಲಿಗೆ ಕೈಬಿಡುವುದಿಲ್ಲ ಎಂದಿರುವ ಅವರು, ಪೆಟ್ರೋಲ್, ಡೀಸೆಲ್ ದರ ಏರಿಸಿದ್ದಾರೆ. ಹಾಲಿನ ದರ ಹೆಚ್ಚಿಸಿದ್ದಾರೆ. ತೈಲ ದರ ಏರಿಸಿದ್ದರಿಂದ ರಾಜ್ಯದೆಲ್ಲೆಡೆ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ ಎಂದು ಹೇಳಿದರು.

ಇದನ್ನೂ ಓದಿ:ಕಾಂಗ್ರೆಸ್ ಸರ್ಕಾರದಲ್ಲಿ ರಾಜ್ಯಕ್ಕೆ ಒಂದೇ ಒಂದು ಕೈಗಾರಿಕೆ ಬರಲಿಲ್ಲ : ಬಿ ವೈ ವಿಜಯೇಂದ್ರ - Sandur Industrial Zone

ABOUT THE AUTHOR

...view details