ಬೆಂಗಳೂರು : ಅಕ್ರಮಗಳು ಆದಾಗ ತನಿಖೆಗಾಗಿ ಆಯೋಗಗಳನ್ನ ರಚಿಸುವುದನ್ನ ನೋಡಿದ್ದೇವೆ. ಆದರೆ, ಅಕ್ರಮ ಆಗಿದೆಯೋ ಇಲ್ಲವೋ ಎಂದು ವರದಿ ನೀಡುವುದಕ್ಕಾಗಿಯೇ ಕಾಂಗ್ರೆಸ್ ಸರ್ಕಾರ ಆಯೋಗವನ್ನ ರಚಿಸಿದೆ. ತಮ್ಮ ಸಚಿವರು ಶಾಸಕರನ್ನ ಹೇಗೆ ರಕ್ಷಿಸಿಕೊಳ್ಳಬೇಕು? ಎದುರಾಳಿಗಳನ್ನ ರಾಜಕೀಯವಾಗಿ ಮುಗಿಸಲು ಯಾವ ರೀತಿ ಕುತಂತ್ರಗಳನ್ನ ಮಾಡಬೇಕು? ಯಾವ ರೀತಿ ಆಯೋಗಗಳನ್ನ ರಚಿಸಬೇಕು? ಆ ಆಯೋಗಗಳಲ್ಲಿ ಯಾರಿರಬೇಕು? ಯಾವ ರೀತಿ ವರದಿಗಳನ್ನ ನೀಡಬೇಕು ಎಂಬುದರಲ್ಲಿ ಕಾಂಗ್ರೆಸ್‌ನವರು ಹಾಗೂ ಸ್ವತಃ ಸಿದ್ಧರಾಮಯ್ಯ ನಿಸ್ಸೀಮರಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ ವಿಜಯೇಂದ್ರ ಗುಡುಗಿದ್ದಾರೆ.
ತಮ್ಮ ಸಚಿವರು, ಶಾಸಕರನ್ನ ರಕ್ಷಿಸಿಕೊಳ್ಳಲಿಲ್ಲವಾ?: ಕೋವಿಡ್ ಅವಧಿಯಲ್ಲಿನ ಅಕ್ರಮಗಳ ಕುರಿತು ತನಿಖೆಗಾಗಿ ಆಯೋಗ ರಚಿಸಿರುವ ಕಾಂಗ್ರೆಸ್ ಸರ್ಕಾರದ ನಿರ್ಧಾರದ ಕುರಿತು ಬೆಂಗಳೂರಿನಲ್ಲಿ ಮಾತನಾಡಿದ ಬಿ. ವೈ ವಿಜಯೇಂದ್ರ, ''ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರಗಳು ಅಧಿಕಾರದಲ್ಲಿದ್ದ ಸಂದರ್ಭಗಳಲ್ಲಿ ಯಾವ್ಯಾವ ಆಯೋಗಗಳನ್ನ ರಚಿಸಿ, ತನಿಖಾ ವರದಿಗಳನ್ನ ನೀಡಿದ್ದಾರೆ ಎಂದು ನಮಗೂ ಗೊತ್ತಿದೆ. ರಾಜ್ಯದ ಜನತೆಗೂ ಗೊತ್ತಿದೆ. ಇದೇ ಸಿದ್ಧರಾಮಯ್ಯನವರು ತಮ್ಮ ಹಿಂದಿನ ಅಧಿಕಾರಾವಧಿಯಲ್ಲಿ ಲೋಕಾಯುಕ್ತ ಮುಚ್ಚಿಹಾಕಿ, ಎಸಿಬಿಯನ್ನ ರಚಿಸುವ ಮೂಲಕ ತಾವು ಹಾಗೂ ತಮ್ಮ ಸಚಿವರು, ಶಾಸಕರನ್ನ ರಕ್ಷಿಸಿಕೊಳ್ಳಲಿಲ್ಲವಾ? ಎಂದು ಪ್ರಶ್ನಿಸಿದರು.
ಬಿಎಸ್ವೈ ವಿರುದ್ಧ ಇಂತಹ ಸಾಕಷ್ಟು ಕುತಂತ್ರಗಳು ನಡೆದಿವೆ: ಮೈಸೂರಿನಲ್ಲಿ ಮುಡಾ ಹಗರಣದ ಕುರಿತು ತನಿಖೆಗೆ ಹಾಜರಾಗುವ ಮುನ್ನ ಲೋಕಾಯುಕ್ತದಲ್ಲಿ ತಮಗೆ ಬೇಕಾದ ತನಿಖಾಧಿಕಾರಿಗಳಿರುವುದನ್ನ ಮನವರಿಕೆ ಮಾಡಿಕೊಂಡು, ಸಿದ್ದರಾಮಯ್ಯ ಶೂರರಂತೆ ತನಿಖೆ ಎದುರಿಸಿದ್ದಾರೆ. ಸಿದ್ದರಾಮಯ್ಯ ಆಗಲಿ, ಕಾಂಗ್ರೆಸ್ ಸರ್ಕಾರವಾಗಲಿ, ಯಡಿಯೂರಪ್ಪ ವಿರುದ್ಧ ಇಂತಹ ಸಾಕಷ್ಟು ಕುತಂತ್ರಗಳು ನಡೆದಿವೆ. ಭಾರತೀಯ ಜನತಾ ಪಾರ್ಟಿಯಾಗಲಿ, ಯಡಿಯೂರಪ್ಪ ಆಗಲಿ ಹೆದರುವವರಲ್ಲ ಎಂದಿದ್ದಾರೆ.