ಬಿ.ವೈ. ವಿಜಯೇಂದ್ರ (ETV Bharat) ಬೆಂಗಳೂರು: ಸಿದ್ದರಾಮಯ್ಯ ರಾಜೀನಾಮೆ ಕೊಡುವ ಪರಿಸ್ಥಿತಿಯನ್ನ ಕಾಂಗ್ರೆಸ್ಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಬಿಜೆಪಿ ವಿರುದ್ಧ ಪಿತೂರಿಗಳು ನಡೆಯುತ್ತಿವೆ. ಸಂದರ್ಭ ಬಂದಾಗ ಇದಕ್ಕೆಲ್ಲಾ ಸೂಕ್ತ ಉತ್ತರ ನೀಡುತ್ತೇನೆ. ಆದರೆ, ಅವರ ಯಾವುದೇ ತಂತ್ರ ಕುತಂತ್ರಕ್ಕೂ ನಾವು ಭಯ ಬೀಳುವ ಪ್ರಶ್ನೆಯೇ ಇಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.
ಸದಸ್ಯತ್ವ ಅಭಿಯಾನದ ಪ್ರಯುಕ್ತ ಪಕ್ಷದ ಹಿರಿಯ ಮುಖಂಡರು ಮತ್ತು ಮಾಜಿ ಸಚಿವರಾದ ರಾಮಚಂದ್ರಗೌಡ ಮನೆಗೆ ಬಿ.ವೈ. ವಿಜಯೇಂದ್ರ ಭೇಟಿ ನೀಡಿ ಸದಸ್ಯತ್ವ ನೀಡಿದರು. ನಂತರ ಮಾತನಾಡಿದ ಅವರು, ಕೋವಿಡ್ ಹಗರಣದ ಆರೋಪ ಮಾಡುವ ಮೂಲಕ ಜನತೆಯ ಗಮನ ಬೇರೆಡೆ ಸೆಳೆಯುವ ಪ್ರಯತ್ನ ನಡೆಸಲಾಗುತ್ತಿದೆ. ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡುವ ಸಂದರ್ಭ ಬಂದಿದೆ ಎಂದು ರಾಜ್ಯದ ಮುಖ್ಯಮಂತ್ರಿಗಳಿಗೆ ಸ್ಪಷ್ಟವಾಗಿದೆ ಎಂದರು.
ಕಳೆದ ಕೆಲವು ದಿನಗಳಿಂದ ಭ್ರಷ್ಟ ಕಾಂಗ್ರೆಸ್ ಸರ್ಕಾರದ ವಿರುದ್ಧ ಹೋರಾಟ ಮಾಡಿಕೊಂಡು ಬಂದಿದ್ದೇವೆ. ವಾಲ್ಮೀಕಿ, ಮುಡಾ ಹಗರಣ ವಿರುದ್ಧ ಹೋರಾಟ ಮಾಡಿದ್ದೇವೆ. ಸಹಜವಾಗಿ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ಮುಖಂಡರ ಪರಿಸ್ಥಿತಿ ನಮಗೆ ಅರ್ಥವಾಗಲಿದೆ ಎಂದು ಹೇಳಿದರು.
ರಾಮಚಂದ್ರೆಗೌಡರಿಗೆ ಬಿಜೆಪಿ ಸದಸ್ಯತ್ವ ನೀಡಿದ ಬಿ.ವೈ. ವಿಜಯೇಂದ್ರ (ETV Bharat) ಎತ್ತಿನಹೊಳೆ ಹಲವಾರು ದಶಕಗಳಿಂದ ಚಿಕ್ಕಬಳ್ಳಾಪುರ, ಕೋಲಾರ ಮತ್ತು ತುಮಕೂರು ಭಾಗದಲ್ಲಿ ನೀರು ಕೊಡುವ ಯೋಜನೆಯಾಗಿದೆ. ಆರಂಭದಲ್ಲಿ ಇದು ಎಂಟೂವರೆ ಸಾವಿರ ಕೋಟಿ ಯೋಜನಾ ವೆಚ್ಚದ್ದಾಗಿತ್ತು. ಆದರೆ ಈಗ 22,000 ಕೋಟಿಗೆ ತಲುಪಿದೆ. ಈ ಯೋಜನೆಗೆ ಚಾಲನೆ ನೀಡುತ್ತಿರುವುದು ಸಂತೋಷ. ಆದರೆ, ಅದರ ಮೂಲ ಉದ್ದೇಶ ಈಡೇರುತ್ತದೆಯಾ ಎನ್ನುವ ಪ್ರಶ್ನೆ ಸಾಕಷ್ಟು ಜನರಲ್ಲಿ ಇದೆ. ಬರುವ ದಿನಗಳಲ್ಲಿ ಎಲ್ಲವೂ ಗೊತ್ತಾಗಲಿದೆ ಎಂದರು.
ಸಿಎಂ ಸ್ಥಾನದ ಆಕಾಂಕ್ಷಿಗಳ ಪಟ್ಟಿ ದೊಡ್ಡದಾಗುತ್ತಿದೆ:ಎತ್ತಿನಹೊಳೆ ಯೋಜನೆಗೆ ಚಾಲನೆ ನೀಡುವ ಸ್ಥಳಕ್ಕೆ ಮುಖ್ಯಮಂತ್ರಿಗಳು ಹೋಗುವ ಮೊದಲೇ ಡಿಸಿಎಂ ಡಿ.ಕೆ. ಶಿವಕುಮಾರ್ ಹೋಗಿ ಪೂಜೆ ಪುನಸ್ಕಾರಗಳನ್ನ ಮಾಡಿದ್ದಾರೆ. ಮುಖ್ಯಮಂತ್ರಿ ಸ್ಥಾನ ಅಲುಗಾಡುತ್ತಿರುವ ಸಂದರ್ಭದಲ್ಲಿ ನಾ ಮುಂದು ತಾ ಮುಂದು ಎನ್ನುವಂತೆ ಅನೇಕ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಗಳ ಪಟ್ಟಿ ದೊಡ್ಡದಾಗುತ್ತಿದೆ. ಡಿ.ಕೆ. ಶಿವಕುಮಾರ್ ಕೂಡ ಆ ಪಟ್ಟಿಯಲ್ಲಿ ಮುಂಚೂಣಿಯಲ್ಲಿದ್ದಾರೆ. ಯಾರ‍್ಯಾರು ಇದರ ಕ್ರೆಡಿಟ್ ತೆಗೆದುಕೊಳ್ಳುತ್ತಾರೋ ನೋಡೋಣ. ಕ್ರೆಡಿಟ್ ತೆಗೆದುಕೊಳ್ಳುವುದು ದೊಡ್ಡ ವಿಚಾರ ಅಲ್ಲ. ಆದರೆ ನಿಜಕ್ಕೂ ಆ ಭಾಗದ ಜನರಿಗೆ ಅನುಕೂಲವಾಗಬೇಕು ಇದರಲ್ಲಿ ಪ್ರಾಮಾಣಿಕತೆ ತೋರಿಸಿದರೆ ಸಾಕು ಎಂದು ಹೇಳಿದರು.
ನಾಡಿನ ಜನತೆಗೆ ಗೌರಿ ಗಣೇಶ ಹಬ್ಬದ ಶುಭಾಶಯಗಳು. ಪ್ರಧಾನಿ ನರೇಂದ್ರ ಮೋದಿ ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ. ರಾಜ್ಯದಲ್ಲಿಯೂ ದೊಡ್ಡ ಮಟ್ಟದಲ್ಲಿ ಸದಸ್ಯತ್ವದ ಅಭಿಯಾನ ನಿರಂತರವಾಗಿ ನಡೆಯುತ್ತಿದೆ. ಗೌರಿ ಹಬ್ಬದ ಶುಭ ಸಂದರ್ಭದಲ್ಲಿ ನಮ್ಮೆಲ್ಲರ ಹಿರಿಯರಾದ ರಾಮಚಂದ್ರಗೌಡರ ಸದಸ್ಯತ್ವವನ್ನು ನೋಂದಣಿ ಮಾಡಿದ್ದೇವೆ. ನಮ್ಮ ತಂದೆ ಯಡಿಯೂರಪ್ಪನವರ ಜೊತೆ ಜೊತೆಯಲಿ ಕಾಲಿಗೆ ಚಕ್ರವನ್ನು ಕಟ್ಟಿಕೊಂಡವರಂತೆ ರಾಜ್ಯಾದ್ಯಂತ ಪ್ರವಾಸ ಮಾಡಿ ಬಿಜೆಪಿಗೆ ಭದ್ರ ಬುನಾದಿಯನ್ನು ಹಾಕಿದವರಲ್ಲಿ ರಾಮಚಂದ್ರಗೌಡ ಕೂಡ ಒಬ್ಬರು. ಈ ಶುಭದಿನದಂದು ಅವರ ಆಶೀರ್ವಾದ ಪಡೆದು ಸದಸ್ಯತ್ವ ನೋಂದಣಿ ಮಾಡಿದ್ದು, ಖುಷಿ ತಂದಿದೆ ಎಂದರು.
ಇದನ್ನೂ ಓದಿ:ಕೇಂದ್ರ ಸರ್ಕಾರದೊಂದಿಗೆ ರಾಜ್ಯ ಸರ್ಕಾರದ ಸಂಘರ್ಷ ಬೇಡ: ಹೆಚ್.ಡಿ.ಕುಮಾರಸ್ವಾಮಿ - H D Kumaraswamy