ಕರ್ನಾಟಕ

karnataka

By ETV Bharat Karnataka Team

Published : Sep 4, 2024, 4:08 PM IST

Updated : Sep 4, 2024, 6:02 PM IST

ETV Bharat / state

ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡಲೇಬೇಕಾಗುತ್ತದೆ, ಕಾದು ನೋಡಿ: ಬಿ.ವೈ. ವಿಜಯೇಂದ್ರ - B Y Vijayendra reaction on CM

ನಮ್ಮ ಸರ್ಕಾರದಲ್ಲಿ ಏನಾದರೂ ಅವ್ಯವಹಾರ ಆಗಿದ್ದರೆ ಅದನ್ನು ತನಿಖೆ ಮಾಡದಂತೆ ತಡೆಯುತ್ತಿಲ್ಲ. ಆದರೆ ಅತೀ ಶೀಘ್ರದಲ್ಲೇ ಸಿಎಂ ರಾಜೀನಾಮೆ ಕೊಡುತ್ತಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಭವಿಷ್ಯ ನುಡಿದಿದ್ದಾರೆ.

ಬಿ.ವೈ. ವಿಜಯೇಂದ್ರ
ಬಿ.ವೈ. ವಿಜಯೇಂದ್ರ (ETV Bharat)

ಬಿ.ವೈ. ವಿಜಯೇಂದ್ರ (ETV Bharat)

ಬೆಂಗಳೂರು: ಮುಡಾ, ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣದ ವಿರುದ್ಧ ಹೋರಾಟ ಕೈಗೆತ್ತಿಕೊಂಡಿದ್ದರಿಂದಾಗಿ ಕಾಂಗ್ರೆಸ್ ಸರ್ಕಾರ ನಮ್ಮ ವಿರುದ್ಧ ಗೊಡ್ಡು ಬೆದರಿಕೆ ಹಾಕಲು ಶುರು ಮಾಡಿದೆ. ಆದರೆ ಇದರಿಂದ ಯಾವುದೇ ಉಪಯೋಗವಿಲ್ಲ, ಆದಷ್ಟು ಬೇಗ ಸಿಎಂ ರಾಜೀನಾಮೆ ಕೊಡಬೇಕಾಗಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.

ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೋವಿಡ್ ನಿರ್ವಹಣೆ ಅವ್ಯವಹಾರ ಕುರಿತ ಮಧ್ಯಂತರ ವರದಿ ಸಲ್ಲಿಕೆಯಾಗಿದೆ. ನಾನು ಸುಧಾಕರ್ ಅವರ ಜೊತೆ ಮಾತಾಡುತ್ತೇನೆ. ಏನೇ ಇದ್ಧರೂ ಕಾನೂನಾತ್ಮವಾಗಿ ಎದುರಿಸುವುದಾಗಿ ಹೇಳಿದ್ದಾರೆ. ನಮ್ಮ ಸರ್ಕಾರದಲ್ಲಿ ಏನಾದರೂ ಅವ್ಯವಹಾರ ಆಗಿದ್ದರೆ ಅದನ್ನು ತನಿಖೆ ಮಾಡದಂತೆ ತಡೆಯುತ್ತಿಲ್ಲ. ಆದರೆ ಅತೀ ಶೀಘ್ರದಲ್ಲೇ ಸಿಎಂ ರಾಜೀನಾಮೆ ಕೊಡುತ್ತಾರೆ ಎಂದು ಭವಿಷ್ಯ ನುಡಿದರು.

ಸಿದ್ಧಾರ್ಥ ವಿಹಾರ ಟ್ರಸ್ಟ್ ಕುರಿತಂತೆ ಛಲವಾದಿ ನಾರಾಯಣಸ್ವಾಮಿ ಮಾತ್ರ ಮಾತನಾಡುತ್ತಾರೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆ ನೀಡಿದ್ದಾರೆ. ಪ್ರಿಯಾಂಕ್ ಖರ್ಗೆಯವರಿಗೆ ನಾನು ಪ್ರಶ್ನೆ ಕೇಳುತ್ತೇನೆ, ನಿನ್ನೆ ಛಲವಾದಿ ನಾರಾಯಣಸ್ವಾಮಿ ವಿರುದ್ಧ ಕಾಂಗ್ರೆಸ್ ನಾಯಕರು ದೂರು ಕೊಡಲು ಹೋಗಿದ್ದಿರಲ್ಲ ಆಗ ಯಾಕೆ ಡಿ.ಕೆ. ಶಿವಕುಮಾರ್ ಇರಲಿಲ್ಲ. ಸಿದ್ದರಾಮಯ್ಯ ಇರಲಿಲ್ಲ, ಯಾಕೆ ಯಾವುದೇ ಹಿರಿಯ ಸಚಿವರು ಇರಲಿಲ್ಲ?. ಯಾಕೆ ರಾಜಭವನದಲ್ಲಿ ಯಾವುದೇ ಕಾಂಗ್ರೆಸ್ ಹಿರಿಯ ನಾಯಕರು ಕಾಣಲಿಲ್ಲ?. ಕಾಂಗ್ರೆಸ್​ನವರು ಬಿಜೆಪಿ ಮೇಲೆ ಕೆಸರು ಎರಚುವ ಕೆಲಸ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಉಪ್ಪು ತಿಂದವರು ನೀರು ಕುಡಿಯಲೇಬೇಕಾಗುತ್ತದೆ. ಯಾವ ಸಿಎಂ ಹಗರಣ ಆಗಿಯೇ ಇಲ್ಲ ಅಂತಾ ಹೇಳಿದ್ದರೋ ಅದೇ ಸಿಎಂ ಹಗರಣ ಆಗಿದೆ ಅಂತಾ ಸದನದಲ್ಲಿ ಒಪ್ಪಿಕೊಂಡಿದ್ದರು. ಮುಡಾ ಆಯುಕ್ತರನ್ನು ಕಾಂಗ್ರೆಸ್ ಸರ್ಕಾರ ಅಮಾನತು ಮಾಡಿದೆ. ಅದರ ಅರ್ಥ ಕಾಂಗ್ರೆಸ್ ಸರ್ಕಾರ ಹಗರಣ ಆಗಿದೆ ಅಂತಾ ಒಪ್ಪಿಕೊಂಡಿದೆ. ಮುಂದೆ ಸಿಎಂ ಸಿದ್ದರಾಮಯ್ಯ ಕೂಡಾ ರಾಜೀನಾಮೆ ಕೊಡಲೇಬೇಕಾಗುತ್ತದೆ, ಕಾದು ನೋಡಿ ಎಂದರು.

ಚನ್ನಪಟ್ಟಣದಲ್ಲಿ ಅಭ್ಯರ್ಥಿ ಆಗಬೇಕೆಂದು ಯೋಗೇಶ್ವರ್ ಇಂಗಿತ:ವಿಪಕ್ಷ ನಾಯಕ ಆರ್​. ಅಶೋಕ್ ನೇತೃತ್ವದಲ್ಲಿ ಚನ್ನಪಟ್ಟಣ ಟಿಕೆಟ್ ಬಗ್ಗೆ ಹೈಕಮಾಂಡ್ ಭೇಟಿ ವಿಚಾರದ ಕುರಿತು ಪ್ರತಿಕ್ರಿಯಿಸಿ, ಉಪಚುನಾವಣೆ ದಿನಾಂಕ ಇನ್ನೂ ಘೋಷಣೆ ಆಗುವುದಿದೆ. ನಾನು ಕೂಡಾ ಅಮಿತ್ ಶಾ, ನಡ್ಡಾ ಜೊತೆ ಚರ್ಚೆ ಮಾಡಿದ್ದೇನೆ. ಚನ್ನಪಟ್ಟಣದಲ್ಲಿ ಯೋಗೇಶ್ವರ್ ಅಭ್ಯರ್ಥಿ ಆಗಬೇಕು ಅಂತಾ ಇಂಗಿತ ವ್ಯಕ್ತಪಡಿಸಿದ್ದಾರೆ. ಶಿಗ್ಗಾಂವಿ, ಸಂಡೂರು ಮತ್ತು ಚನ್ನಪಟ್ಟಣ ಕ್ಷೇತ್ರಗಳ ಬಗ್ಗೆ ರಾಜ್ಯಮಟ್ಟದಲ್ಲಿ ಚರ್ಚೆ ಮಾಡುತ್ತೇವೆ. ನಂತರ ಅಭ್ಯರ್ಥಿಗಳ ಹೆಸರನ್ನು ಹೈಕಮಾಂಡ್​ಗೆ ಶಿಫಾರಸು ಮಾಡುತ್ತೇವೆ ಎಂದು ಮಾಹಿತಿ ನೀಡಿದರು.

ಬಿಜೆಪಿ ಮನೆಯೊಂದು ಮೂರು ಬಾಗಿಲು ಎಂದು ಕಾಂಗ್ರೆಸ್ ನಾಯಕರು ಟೀಕೆ ಮಾಡಿದ್ದಾರೆ, ಮುಡಾ ಪ್ರಕರಣದ ವಿಚಾರಣೆ ಕೋರ್ಟ್​ನಲ್ಲಿ ಮುಗಿಯಲಿ. ಆಗ ಯಾರ ಮನೆ ಮೂರು ಬಾಗಿಲು ಆಗಿದೆ ಅನ್ನೋದು ಎಲ್ಲವೂ ಗೊತ್ತಾಗುತ್ತದೆ ಎಂದು ತಿರುಗೇಟು ನೀಡಿದರು.

ಇದನ್ನೂ ಓದಿ:ಸಿಎಂ ಚೇರ್ ಖಾಲಿ ಇಲ್ಲ, ಕಾಂಗ್ರೆಸ್​ನಲ್ಲಿ ಹೈಕಮಾಂಡ್ ತೀರ್ಮಾನವೇ ಅಂತಿಮ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ - Minister Lakshmi Hebbalkar

Last Updated : Sep 4, 2024, 6:02 PM IST

ABOUT THE AUTHOR

...view details