ಮೈಸೂರು: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೈಸೂರು ಪ್ರವಾಸ ಯಶಸ್ವಿಯಾಗಿದೆ. ಸುತ್ತೂರು ಮಠದ ಜಾತ್ರಾ ಮಹೋತ್ಸವ, ಚಾಮುಂಡೇಶ್ವರಿ ದರ್ಶನ ಹಾಗೂ ಕೋರ್ ಕಮಿಟಿಯ ಸಭೆ ಜೊತೆಗೆ ಮೈಸೂರು ಕ್ಲಸ್ಟರ್ ಸಭೆಯಲ್ಲಿ ರಾಜ್ಯದ ಎಲ್ಲಾ 28 ಲೋಕಸಭಾ ಕ್ಷೇತ್ರಗಳಲ್ಲಿ ಗೆಲ್ಲುವ ಬಗ್ಗೆ ಚರ್ಚೆ ಆಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ತಿಳಿಸಿದರು. ಮೈಸೂರಿನ ಖಾಸಗಿ ಹೋಟೆಲ್ನಲ್ಲಿ ನಡೆದ ಕೋರ್ ಕಮಿಟಿ ಸಭೆ ಹಾಗೂ ಮೈಸೂರು ಕ್ಲಸ್ಟರ್ ಸಭೆ ಮುಗಿದ ಬಳಿಕ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.
ರಾಜ್ಯದ ಎಲ್ಲಾ 28 ಲೋಕಸಭಾ ಕ್ಷೇತ್ರದಲ್ಲಿ ಎನ್ಡಿಎ ಕೂಟ ಗೆಲ್ಲುವ ಬಗ್ಗೆ ಚರ್ಚೆಯಾಗಿದೆ. ನರೇಂದ್ರ ಮೋದಿಯವರ ಜನಪ್ರಿಯತೆಯನ್ನು ಮತವಾಗಿ ಪರಿವರ್ತಿಸುವ ಬಗ್ಗೆ ಚರ್ಚೆ ಆಗಿದೆ. ಪಕ್ಷ ಕಳೆದ ಬಾರಿ ಪಡೆದ ವೋಟಿಂಗ್ಗಿಂತ ಈ ಬಾರಿ ವೋಟಿಂಗ್ ಪ್ರಮಾಣ ಹೆಚ್ಚಾಗಬೇಕು. ಬಿಜೆಪಿ ಹಾಗೂ ಜೆಡಿಎಸ್ ಜೊತೆಗೂಡಿ ಕೆಲಸ ಮಾಡಬೇಕು ಎಂದು ಅಮಿತ್ ಶಾ ಹೇಳಿದ್ದಾರೆ ಎಂದರು.
ಸೀಟು ಹಂಚಿಕೆ ದೆಹಲಿಯಲ್ಲಿ ಫೈನಲ್ ಅಗುತ್ತದೆ:ಜೆಡಿಎಸ್ ಹಾಗೂ ಬಿಜೆಪಿ ನಡುವೆ ರಾಜ್ಯದ 28 ಕ್ಷೇತ್ರಗಳ ಸೀಟು ಹಂಚಿಕೆಯನ್ನು ದೆಹಲಿಯಲ್ಲಿ ಪಕ್ಷದ ಪ್ರಮುಖರು ಕೂತು ಫೈನಲ್ ಮಾಡುತ್ತಾರೆ. ಯಾರೇ ಅಭ್ಯರ್ಥಿ ಅದರೂ ಒಟ್ಟಾಗಿ ದುಡಿಯಬೇಕು ಎಂಬ ಮಾತನ್ನು ಅಮಿತ್ ಶಾ ಹೇಳಿದ್ದಾರೆ. ಅವರ ಸಲಹೆಯನ್ನು ಪಡೆದುಕೊಂಡು ಕೆಲಸ ಮಾಡುತ್ತೇವೆ. ನಮ್ಮ ಅಭ್ಯರ್ಥಿಗಳು ಗೆಲ್ಲಬೇಕು ಎಂಬುದೇ ನಮ್ಮ ಗುರಿ ಎಂದು ತಿಳಿಸಿದರು.