ಕರ್ನಾಟಕ

karnataka

ETV Bharat / state

ರಾಹುಲ್ ಗಾಂಧಿ ಮುಗಿಸಲು ಬಿಜೆಪಿ ಸಂಚು: ಸಿಎಂ ಸಿದ್ದರಾಮಯ್ಯ ಆರೋಪ - cm siddaramaiah slams bjp - CM SIDDARAMAIAH SLAMS BJP

ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ಮುಗಿಸಲು ಬಿಜೆಪಿ ಸಂಚು ನಡೆಸುತ್ತಿದೆ. ರಾಜಕೀಯವಾಗಿಯೂ ಮುಗಿಸುವ ಜೊತೆಗೆ ಪ್ರಾಣ ಭಯ ಹುಟ್ಟಿಸುವ ಬಿಜೆಪಿ ಷಡ್ಯಂತ್ರ ಆತಂಕ ಹುಟ್ಟಿಸಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಸಿಎಂ ಸಿದ್ದರಾಮಯ್ಯ
ಸಿಎಂ ಸಿದ್ದರಾಮಯ್ಯ (ETV Bharat)

By ETV Bharat Karnataka Team

Published : Sep 18, 2024, 6:00 PM IST

ಬೆಂಗಳೂರು: ರಾಹುಲ್ ಗಾಂಧಿ ಅವರನ್ನು ಮುಗಿಸಲು ಬಿಜೆಪಿ ಸಂಚು ನಡೆಸುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಗೃಹ ಕಚೇರಿ ಕೃಷ್ಣಾದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಹುಲ್ ಗಾಂಧಿ ಅವರಿಗೆ ಕೊಲೆ ಬೆದರಿಕೆ, ತೇಜೋವಧೆಗೆ ಸುಳ್ಳಿನ ಸರಮಾಲೆ ಸೃಷ್ಟಿ ಮಾಡುತ್ತಿದೆ. ತ್ಯಾಗ ಬಲಿದಾನದ ಸಂಸ್ಕೃತಿ ಮತ್ತು ಹುತಾತ್ಮರ ಕುಟುಂಬದಿಂದ ಬಂದ ರಾಹುಲ್ ಗಾಂಧಿ ಅವರು ಇದಕ್ಕೆಲ್ಲ ಹೆದರುವವರಲ್ಲ ಎಂದರು.

ಇಂಧಿರಾಗಾಂಧಿ, ರಾಜೀವ್ ಗಾಂಧಿ ದೇಶಕ್ಕಾಗಿ ಹುತಾತ್ಮರಾಗಿದ್ದಾರೆ. ಇಂಥಾ ಉನ್ನತ ತ್ಯಾಗ ಬಲಿದಾನದ ಕುಟುಂಬದಿಂದ ಬಂದ ರಾಹುಲ್ ಗಾಂಧಿ ಅವರು ದೇಶಕ್ಕಾಗಿ ಅವಿರತ ಹೋರಾಟ ನಡೆಸುತ್ತಿದ್ದಾರೆ. ಅಜ್ಜಿ ಇಂದಿರಾಗಾಂಧಿ ಅವರಿಗೆ ಆದ ಗತಿಯೇ ನಿಮಗೂ ಆಗುತ್ತದೆ ಎಂದು ರಾಹುಲ್​ಗೆ ಬಿಜೆಪಿ‌ ಬೆದರಿಕೆ ಹಾಕಿದೆ ಎಂದು ದೂರಿದರು.

ಕೇಂದ್ರದ ರೈಲ್ವೆ ಖಾತೆ ರಾಜ್ಯ ಸಚಿವ ರವನೀತ್ ಬಿಟ್ಟು, ರಾಹುಲ್ ಗಾಂಧಿ ಅವರನ್ನು ಭಯೋತ್ಪಾದಕ ಎಂದು ಕರೆದಿದ್ದಾರೆ. ಈ ರೀತಿ ಜೀವ ಬೆದರಿಕೆಗಳ ಮೂಲಕ ಬಿಜೆಪಿಯ ಕಾರ್ಯಕರ್ತರನ್ನು ಎತ್ತಿಕಟ್ಟುವ ಷಡ್ಯಂತ್ರ ನಡೆಯುತ್ತಿದೆ. ರಾಹುಲ್ ಗಾಂಧಿ ನಾಲಗೆ ಕತ್ತರಿಸಿದವರಿಗೆ 11 ಲಕ್ಷ ಬಹುಮಾನ‌ ಕೊಡುವುದಾಗಿ ಶಿವಸೇನೆಯ ಶಿಂಧೆ ಬಣದ ಶಾಸಕ ಸಂಜಯ್ ಗಾಯಕ್​ವಾಡ್ ಅವರು ರಾಹುಲ್ ಗಾಂಧಿ ನಾಲಗೆ ಕತ್ತರಿಸಲು ಕರೆ ನೀಡಿದ್ದಾರೆ. ಇದೂ ಕೂಡ ಕೊಲೆ ಬೆದರಿಕೆಯೇ ಆಗಿದೆ. ಆದ್ದರಿಂದ ಈ ಕೂಡಲೇ ಸಂಜಯ್ ಗಾಯಕ್​ವಾಡ್ ಮೇಲೆ ಕ್ರಿಮಿನಲ್ ಕೇಸು ದಾಖಲಿಸಿ ಜೈಲಿಗೆ ತಳ್ಳಲು ಎಂದು ಆಗ್ರಹಿಸಿದರು.

ಉತ್ತರ ಪ್ರದೇಶದ ಸಚಿವರೊಬ್ಬರು ರಾಹುಲ್ ಗಾಂಧಿ ಈ ದೇಶದ ನಂಬರ್ ಒನ್ ಭಯೋತ್ಪಾದಕ ಎಂದು ಹೇಳಿಕೆ ನೀಡಿದ್ದಾರೆ. ಆದರೆ, ಇವತ್ತಿನವರೆಗೂ ಬಿಜೆಪಿ ಪಕ್ಷವಾಗಲಿ, ಬಿಜೆಪಿ ಸರ್ಕಾರವಾಗಲಿ, ಕೇಂದ್ರ ಸರ್ಕಾರವಾಗಲಿ ಕಠಿಣ ಕ್ರಮ ತೆಗೆದುಕೊಂಡಿಲ್ಲ. ಕಾಟಾಚಾರಕ್ಕೆ ಕೇಸು ದಾಖಲಿಸಿ ಕೈ ಚೆಲ್ಲಿದ್ದಾರೆ. ಬಿಜೆಪಿ ವಿರುದ್ಧ ಪ್ರತಿಭಟನೆ ನಡೆಸಿದ ಕಾಂಗ್ರೆಸ್ ಕಾರ್ಯಕರ್ತರನ್ನು ಹೂತು ಹಾಕುವುದಾಗಿ ಸಂಜಯ್ ಗಾಯಕ್​ವಾಡ್ ಮತ್ತೆ ಬೆದರಿಕೆ ಹಾಕಿದ್ದಾನೆ ಎಂದರು.

ರಾಹುಲ್ ಗಾಂಧಿಯವರನ್ನು ಮುಗಿಸಲು ಬಿಜೆಪಿ ಸಂಚು ನಡೆಸುತ್ತಿದೆ. ರಾಜಕೀಯವಾಗಿಯೂ ಮುಗಿಸುವ ಜೊತೆಗೆ ಪ್ರಾಣ ಭಯ ಹುಟ್ಟಿಸುವ ಬಿಜೆಪಿ ಷಡ್ಯಂತ್ರ ಆತಂಕಕಾರಿಯಾದದ್ದು.‌ ರಾಹುಲ್ ಗಾಂಧಿ ಅವರಿಗೆ ಜೀವ ಬೆದರಿಕೆ ಹಾಕಿರುವ ಎಲ್ಲರ ವಿರುದ್ಧ ಕ್ರಿಮಿನಲ್ ಕೇಸು ಹಾಕಿ ತಕ್ಷಣ ಬಂಧಿಸಬೇಕು. ತ್ಯಾಗ ಬಲಿದಾನದ ಸಂಸ್ಕೃತಿ ಮತ್ತು ಹುತಾತ್ಮರ ಕುಟುಂಬದಿಂದ ಬಂದ ರಾಹುಲ್ ಗಾಂಧಿ ಅವರು ಇದಕ್ಕೆಲ್ಲಾ ಹೆದರುವವರಲ್ಲ ಎಂದು ಹೇಳಿದರು.

ನರೇಂದ್ರ ಮೋದಿ ಈ ಬಾರಿ ಐದು ವರ್ಷ ಪೂರೈಸುವುದು ಡೌಟು:ನರೇಂದ್ರ ಮೋದಿ ಈ ಬಾರಿ ಐದು ವರ್ಷ ಪೂರೈಸಲ್ಲ ಎಂದು ಸಿಎಂ ಸಿದ್ದರಾಮಯ್ಯ ಅವರು ಇದೇ ಸಂದರ್ಭದಲ್ಲಿ ಹೇಳಿದರು. ದೇಶದಲ್ಲಿ‌ ಆಗುತ್ತಿರುವ ರಾಜಕಾರಣದ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಮೋದಿ ಅವರು ಈ ಬಾರಿ ಪೂರ್ಣಾವಧಿ ಮುಗಿಸೋದು ಡೌಟು. ನಿತೀಶ್ ಕುಮಾರ್, ಚಂದ್ರಬಾಬು ನಾಯ್ಡು ಅವರು ಹೆಚ್ಚು ದಿನ ಕೇಂದ್ರ ಸರ್ಕಾರದ ಜೊತೆ ಇರುವುದಿಲ್ಲ ಎನ್ನಿಸುತ್ತಿದೆ ಎಂದು ತಿಳಿಸಿದರು.

ಅಸಹ್ಯವಾಗಿ ನಾಲಗೆ ಹರಿಬಿಟ್ಟು ಮಹಿಳಾ ಸಮುದಾಯವನ್ನು, ದಲಿತ ಜನಾಂಗವನ್ನು, ಒಕ್ಕಲಿಗ ಸಮುದಾಯವನ್ನು ಅತ್ಯಂತ ಕೆಟ್ಟದಾಗಿ ಅವಹೇಳನ ಮಾಡಿರುವ ಬಿಜೆಪಿ ಶಾಸಕ ಮುನಿರತ್ನ ವಿರುದ್ಧ ತನಿಖೆಗೆ ವಿಶೇಷ ತನಿಖಾ ತಂಡ ರಚಿಸಬೇಕು ಎನ್ನುವ ಬೇಡಿಕೆ ಇದೆ. ಸದ್ಯ ಮುನಿರತ್ನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಪೊಲೀಸರು ತನಿಖೆ ನಡೆಸಿದ್ದಾರೆ. ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ನ್ಯಾಯಾಲಯ ಮುನಿರತ್ನ ಅವರನ್ನು ಜೈಲಿಗೆ ಒಪ್ಪಿಸಿದೆ ಎಂದರು.

ಇದನ್ನೂ ಓದಿ:ಸಂಗೊಳ್ಳಿ ರಾಯಣ್ಣನ ಹೆಸರು ಹೇಳಲೂ ಸಿದ್ದರಾಮಯ್ಯರಿಗೆ ನೈತಿಕತೆ ಇಲ್ಲ; ರವಿಕುಮಾರ್ - Ravikumar slams CM

ABOUT THE AUTHOR

...view details