ಬೆಂಗಳೂರು: "ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇಂದು ಮಂಡಿಸಿದ 2024-25ನೇ ಸಾಲಿನ ಆಯವ್ಯಯದಲ್ಲಿ ನನ್ನ ಕ್ಷೇತ್ರಕ್ಕೆ ಅನುಕೂಲವಾಗಿದೆ. ನನ್ನ ಬೇಡಿಕೆಗಳನ್ನು ಪರಿಗಣಿಸಲಾಗಿದೆ. ಅದಕ್ಕಾಗಿ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಗಳಿಗೆ ಧನ್ಯವಾದ ಸಲ್ಲಿಸುತ್ತೇನೆ. ಇನ್ನು ಬಿಜೆಪಿ ಪ್ರತಿಭಟನೆ ಬಗ್ಗೆ ನನಗೆ ಗೊತ್ತಿಲ್ಲ. ಅದು ಪ್ರತಿಭಟನೆ ಮಾಡುವವರಿಗೆ ಸೇರಿದ್ದು" ಎಂದು ಯಶವಂತಪುರ ಕ್ಷೇತ್ರದ ಬಿಜೆಪಿ ಶಾಸಕ ಎಸ್.ಟಿ.ಸೋಮಶೇಖರ್ ತಿಳಿಸಿದರು.
ವಿಧಾನಸೌಧದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ನನ್ನ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಮೂರು ಬೇಡಿಕೆಗಳನ್ನು ಸಿಎಂ, ಡಿಸಿಎಂ ಮುಂದಿಟ್ಟಿದ್ದೆ. ಕ್ಷೇತ್ರದ ಜನರಿಗೆ ಸಮಸ್ಯೆಯಾಗಿದ್ದ ಕಸದ ಘಟಕಗಳನ್ನು ಸ್ಥಳಾಂತರಿಸುವ ಕುರಿತು ಬಜೆಟ್ನಲ್ಲಿ ಹೇಳಲಾಗಿದೆ. ರಸ್ತೆ ವೈಟ್ ಟ್ಯಾಪಿಂಗ್ಗೆ ಅನುದಾನ, ಕುಡಿಯುವ ನೀರಿನ ಯೋಜನೆಗೆ ಅನುದಾನ ನೀಡಲಾಗಿದೆ. 110 ಹಳ್ಳಿಗೆ ಕಾವೇರಿ ನೀರು ಘೋಷಿಸಿದ್ದಾರೆ. ಇದು ಬೆಂಗಳೂರು ಅಭಿವೃದ್ಧಿಗೆ ಪೂರಕ ಬಜೆಟ್" ಎಂದು ಹೇಳಿದರು.