ಬೆಂಗಳೂರು: "ದೇಶದಲ್ಲೇ ಕರ್ನಾಟಕ ಬಿಜೆಪಿ ಅತ್ಯಂತ ಭ್ರಷ್ಟ ಪಕ್ಷ. ಬಿಜೆಪಿಯ ಭ್ರಷ್ಟಾಚಾರವನ್ನು ಬಯಲು ಮಾಡಲು ಅವರೇ ಕರೆಯುತ್ತಿದ್ದಾರೆ. ಈಗ ನಾವು ನಮ್ಮ ಶಕ್ತಿ ತೋರಿಸುತ್ತೇವೆ" ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.
ಬಿಜೆಪಿ ಸರ್ಕಾರದ ವಿರುದ್ಧ ಆಧಾರ ರಹಿತ ಜಾಹೀರಾತು ನೀಡಿದ್ದ ಆರೋಪದಲ್ಲಿ ದಾಖಲಾಗಿದ್ದ ಖಾಸಗಿ ಪ್ರಕರಣದ ಹಿನ್ನೆಲೆ ಸಿವಿಲ್ ನ್ಯಾಯಾಲಯಕ್ಕೆ ಹಾಜರಾದ ಬಳಿಕ ನಗರದ ಸಿವಿಲ್ ನ್ಯಾಯಾಲಯದ ಮುಂಭಾಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ನಮ್ಮ ಜಾಹೀರಾತುಗಳ ಬಗ್ಗೆ ಬಿಜೆಪಿಯವರು ಖಾಸಗಿ ದೂರು ನೀಡಿದ್ದಾರೆ. ನಾವು ಸುಮ್ಮನೆ ಜಾಹೀರಾತು ನೀಡಿಲ್ಲ. ಬಿಜೆಪಿ ನಾಯಕರ, ಸಚಿವರ ಹೇಳಿಕೆಗಳ ಆಧಾರದ ಮೇಲೆ ಹಾಗೂ ಮಾಧ್ಯಮಗಳಲ್ಲಿ ಬಂದ ವರದಿಯನ್ನು ಆಧರಿಸಿ ಹಿಂದಿನ ರಾಜ್ಯ ಬಿಜೆಪಿ ಸರ್ಕಾರದ ಹಗರಣಗಳ ಬಗ್ಗೆ ಪತ್ರಿಕಾ ಜಾಹೀರಾತು ನೀಡಿದ್ದೆವು. ಇದನ್ನೆಲ್ಲಾ ನಾವು ಸಾಬೀತು ಮಾಡುತ್ತೇವೆ" ಎಂದು ವಿವರಿಸಿದರು.
"ಅಲ್ಲದೆ, ಕೇಂದ್ರದ ಮಾಜಿ ಸಚಿವ, ಶಾಸಕ ಯತ್ನಾಳ್ ಅವರೇ ತಮ್ಮ ಬಿಜೆಪಿ ಸರ್ಕಾರದ ಮೇಲೆ ಹಗರಣದ ಆರೋಪ ಮಾಡಿದ್ದರು. ಹಣ ನೀಡದೇ ಯಾವುದೇ ಮಂತ್ರಿ ಸ್ಥಾನ ಸಿಗುವುದಿಲ್ಲ ಎಂದು ಹೇಳಿಕೆ ನೀಡಿದ್ದರು. ಮುಖ್ಯಮಂತ್ರಿ ಸ್ಥಾನಕ್ಕೆ 2,500 ಸಾವಿರ ಕೋಟಿ, ಮಂತ್ರಿ ಹುದ್ದೆಗೆ 100 ಕೋಟಿ ಎಂದು ಹೇಳಿಕೆ ನೀಡಿದವರು ಬಿಜೆಪಿಯವರೇ ಅಲ್ಲವೇ? ಕಾಸಿದ್ದರೆ ಸರ್ಕಾರದ ಹುದ್ದೆ ಎನ್ನುವ ಪತ್ರಿಕಾ ವರದಿಯ ಪ್ರಕಾರ, ಎ ದರ್ಜೆಯ ಗೆಜೆಟೆಡ್ ಹುದ್ದೆಗೆ 70 ಲಕ್ಷ. ಎಸಿಗೆ 1.50 ಕೋಟಿ, ಡಿವೈಎಸ್ಪಿಗೆ 80 ಲಕ್ಷ, ತಹಶೀಲ್ದಾರ್ ಹುದ್ದೆಗೆ 60- 80 ಲಕ್ಷ, ಪೊಲೀಸ್ ಸಬ್ ಇನ್ಸ್ಪೆಕ್ಟರ್ ಹುದ್ದೆಗೆ 40 ಲಕ್ಷದಿಂದ 1.5 ಕೋಟಿ, ಅಸಿಸ್ಟೆಂಟ್ ಎಂಜಿನಿಯರ್ಗೆ 80 ಲಕ್ಷ, ಸಹಾಯಕ ಅರಣ್ಯ ಅಧಿಕಾರಿಗೆ 50 ಲಕ್ಷ, ಎಸ್ಡಿಎಗೆ 10 ರಿಂದ 15 ಲಕ್ಷ ರೂ. ಫಿಕ್ಸ್ ಆಗಿದೆ ಎಂದು ಪತ್ರಿಕೆಗಳಲ್ಲಿ ವರದಿಯಾಗಿತ್ತು. ಈ ಆಧಾರದಲ್ಲಿ ಕಾಂಗ್ರೆಸ್ ಜಾಹೀರಾತು ನೀಡಿತ್ತು" ಎಂದು ವಿವರಿಸಿದರು.