ಬೆಳಗಾವಿ: ಸ್ಪೀಕರ್ ಯು.ಟಿ.ಖಾದರ್ ನಡೆ ಖಂಡಿಸಿ ಬಿಜೆಪಿ ಸದಸ್ಯರು ಅವರ ಕೊಠಡಿಗೆ ತೆರಳಿ ತರಾಟೆಗೆ ತೆಗೆದುಕೊಂಡ ಪ್ರಸಂಗ ಇಂದು ನಡೆಯಿತು. ಸದನದಲ್ಲಿ ಸ್ಪೀಕರ್ ಖಾದರ್ ಪಕ್ಷಾತೀತವಾಗಿ ನಡೆದುಕೊಳ್ತಿಲ್ಲ ಎಂದು ಆರೋಪಿಸಿ ಸದನ ಮುಂದೂಡಿಕೆಯಾದ ಕೂಡಲೇ ಬಿಜೆಪಿ ಸದಸ್ಯರೆಲ್ಲರೂ ಸ್ಪೀಕರ್ ಕೊಠಡಿಗೆ ತೆರಳಿ ಘೇರಾವ್ ಹಾಕಿದರು. ಈ ವೇಳೆ ಗದ್ದಲ, ಗಲಾಟೆ, ಮಾತಿನ ಚಕಮಕಿ ನಡೆಯಿತು. ಏಕಾಏಕಿ ಸ್ಪೀಕರ್ ಕೊಠಡಿಗೆ ಬಿಜೆಪಿ ಸದಸ್ಯರು ನುಗ್ಗಿದ ಪರಿಣಾಮ ಮಾರ್ಷಲ್‌ಗಳು ಏನು ನಡೆಯುತ್ತಿದೆ ಎಂದು ಗೊತ್ತಾಗದೇ ಗೊಂದಲಕ್ಕೊಳಗಾದರು.
ಗದ್ದಲದ ಮಧ್ಯೆಯೇ ಸ್ಪೀಕರ್ ಕೊಠಡಿ ಬಾಗಿಲು ಹಾಕಿದ ಮಾರ್ಷಲ್‌ಗಳು ಒಳಗಿನ ಗಲಾಟೆ ಹೊರಗೆ ಕೇಳಿಸದಂತೆ ತಡೆಯಲು ಕಸರತ್ತು ನಡೆಸಿದರು. ಶೂನ್ಯ ವೇಳೆಯಲ್ಲಿ ಮೀಸಲಾತಿ ಸಂಬಂಧ ಚರ್ಚೆಗೆ ಅವಕಾಶ ನೀಡುವಂತೆ ಬಿಜೆಪಿ ಹಾಗೂ ಕಾಂಗ್ರೆಸ್ ಸದಸ್ಯ ವಿಜಯಾನಂದ ಕಾಶಪ್ಪನವರ್ ನೋಟಿಸ್ ನೀಡಿದ್ದರು. ಈ ಮಧ್ಯೆ ಪಂಚಮಸಾಲಿ ಪ್ರತಿಭಟನಾಕಾರರ ಮೇಲಿನ ಲಾಠಿ ಚಾರ್ಜ್ ಸಂಬಂಧ ಗೃಹ ಸಚಿವರು ಉತ್ತರ ನೀಡಿದರು. ಅದಾದ ಬಳಿಕ ಆರ್.ಅಶೋಕ್ ಗೃಹ ಸಚಿವರ ಉತ್ತರದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು.
ಬಳಿಕ ಲಾಠಿ ಚಾರ್ಜ್ ಬಗ್ಗೆ ಸ್ಪೀಕರ್ ವಿಜಯಾನಂದ ಕಾಶಪ್ಪನವರ್ಗೆ ಮಾತನಾಡಲು ಸ್ಪೀಕರ್ ಅವಕಾಶ ನೀಡಿದರು. ಕಾಶಪ್ಪನವರ್ ಅವರು ಲಾಠಿ ಚಾರ್ಜ್ ವಿಚಾರದ ಜೊತೆಗೆ ಮೀಸಲಾತಿ ಸಂಬಂಧ ವಿಚಾರ ಪ್ರಸ್ತಾಪಿಸಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ಈ ವೇಳೆ ಬಿಜೆಪಿ ಸದಸ್ಯ ಸುನಿಲ್ ಕುಮಾರ್ ಕ್ರಿಯಾ ಲೋಪ ಎತ್ತಿದರು. ಇದಕ್ಕೆ ಸ್ಪಂದಿಸದ ಸಭಾಧ್ಯಕ್ಷರು, ಸಚಿವ ಕೃಷ್ಣ ಬೈರೇಗೌಡರಿಗೆ ಚರ್ಚೆಗೆ ಅವಕಾಶ ಕೊಟ್ಟರು. ಈ ವೇಳೆ ಬಿಜೆಪಿ ಸದಸ್ಯರಿಂದ ತೀವ್ರ ಆಕ್ರೋಶ ವ್ಯಕ್ತವಾಯಿತು. ಒಂದೇ ವಿಚಾರವಾಗಿ ಇಬ್ಬರು ಸಚಿವರಿಗೆ ಸ್ಪಷ್ಟನೆ ನೀಡಲು ಹೇಗೆ ಸಾಧ್ಯ? ಎಂದು ಕ್ರಿಯಾ ಲೋಪ ಎತ್ತಿದರು. ಗದ್ದಲ ಹೆಚ್ಚಾದ ಹಿನ್ನೆಲೆಯಲ್ಲಿ ಸದನವನ್ನು ಭೋಜನ ವಿರಾಮಕ್ಕೆ ಮುಂದೂಡಲಾಯಿತು.