ಹಾವೇರಿ:ಗ್ಯಾಂಗ್ರೇಪನಂತಹ ಹೇಯ ಕೃತ್ಯ ಮಾಡಿದ ರಾವಣ ದುರ್ಯೋಧನ ದುಶ್ಯಾಸನರಿಗೆ ತಕ್ಕಶಿಕ್ಷೆಯಾಗಬೇಕು ಎಂದು ವಿಧಾನಸಭೆ ಪ್ರತಿಪಕ್ಷನಾಯಕ ಆರ್.ಅಶೋಕ್ ಆಗ್ರಹಿಸಿದ್ದಾರೆ. ಗ್ಯಾಂಗ್ ರೇಪ್ ಪ್ರಕರಣ ಖಂಡಿಸಿ ಹಾವೇರಿಯಲ್ಲಿ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ ನಂತರ ಅವರು ಮಾತನಾಡಿದರು.
ಜ.8 ರಂದು ಹಾನಗಲ್‌ನ ನಾಲ್ಕರ ಕ್ರಾಸ್‌ನಲ್ಲಿ ನಡೆದ ಗ್ಯಾಂಗ್ರೇಪ್ ಆರೋಪಿಗಳನ್ನು ಸರ್ಕಾರ ರಕ್ಷಣೆ ಮಾಡುತ್ತಿದೆ. ಪ್ರಕರಣದ ಸರಿಯಾದ ತನಿಖೆಯಾಗಬೇಕಾದರೆ SIT ತನಿಖೆಗೆ ವಹಿಸುವಂತೆ ಆಗ್ರಹಿಸಿದರು. ಲ್ಯಾಬ್ ರಿಪೋರ್ಟ್ ಇನ್ನೂ ಬಂದಿಲ್ಲ. ಈ ಘಟನೆಯ ನಿಜವಾದ ಆರೋಪಿಗಳಿಗೆ ತಕ್ಕ ಶಿಕ್ಷೆಯಾಗಬೇಕು. ಇಲ್ಲದಿದ್ದರೆ ಫೆಬ್ರುವರಿ 12 ರಂದು ಆರಂಭವಾಗುವ ಅಧಿವೇಶನದಲ್ಲಿ ಸಹ ಪ್ರಸ್ತಾಪ ಮಾಡಲಾಗುವುದು. ಸರ್ಕಾರ ಪ್ರಕರಣ ಮುಚ್ಚಿಹಾಕುವ ಪ್ರಯತ್ನಬಿಟ್ಟು ಕೂಡಲೇ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಆರ್.ಅಶೋಕ್ ಒತ್ತಾಯಿಸಿದರು.
ಡಿಸಿಎಂ ಡಿ.ಕೆ.ಶಿವಕುಮಾರ್ ಹೆಸರು ಪ್ರಸ್ತಾಪಿಸಿದ ಆರ್.ಅಶೋಕ್, ಕುಕ್ಕರ್ ಬಾಂಬ್ ಸ್ಫೋಟದ ವೇಳೆ ನಮ್ಮ ಬ್ರದರ್ಸ್ ಎಂದು ನೀವು ಬ್ರದರ್ಸ್ ಪರ ಮಾತ್ರ ದ್ವನಿ ಎತ್ತುತ್ತೀರಾ? ಆದರೆ ಸಿಸ್ಟರ್‌ಗೆ ತೊಂದರೆಯಾದರೆ ದ್ವನಿ ಎತ್ತುವುದಿಲ್ವಾ ಎಂದು ಪ್ರಶ್ನಿಸಿದರು. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಆಗೋ ಸಂದರ್ಭದಲ್ಲಿ ಇಂಥ ರಾವಣ, ದುರ್ಯೋಧನ, ದುಶ್ಯಾಸನರಿಗೆ ಸರಿಯಾದ ಶಿಕ್ಷೆ ಆಗಬೇಕು. ಖಂಡಿತವಾಗಿ ಅಧಿವೇಶನದಲ್ಲಿ ಈ ಬಗ್ಗೆ ಹೋರಾಟ ಮಾಡ್ತೇವೆ. 50 ಲಕ್ಷ ಆಮೀಷ ಕೊಡೋಕೆ ಹೋದೋರು ಯಾರು ಎಂಬುದು ತನಿಖೆ ಆಗಬೇಕು. ಆದರೆ, ಸರ್ಕಾರ ಪ್ರಕರಣವನ್ನು ವ್ಯವಸ್ಥಿತವಾಗಿ ಮುಚ್ಚಿ ಹಾಕುವ ಕೆಲಸ ಮಾಡುತ್ತಿದೆ ಎಂದು ಪ್ರತಿಪಕ್ಷ ಶಾಸಕ ದೂರಿದರು.