ಬೆಂಗಳೂರು : ಬಿಜೆಪಿ ನಾಯಕರಾದ ಮುರುಗೇಶ್ ನಿರಾಣಿ, ವಿಧಾನಪರಿಷತ್ತಿನ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಸಂಘಪರಿವಾರದ ರಾಷ್ಟ್ರೋತ್ಥಾನ ಪರಿಷತ್ ಸೇರಿದಂತೆ ತಮ್ಮ ಅಧಿಕಾರ ಬಳಸಿ ಕೆಎಐಡಿಬಿ ಭೂಮಿಯನ್ನು ಪಡೆದಿದ್ದಾರೆ ಎಂದು ಬೃಹತ್ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಹೇಳಿದ್ದಾರೆ.
ವಿಧಾನಸೌಧದಲ್ಲಿ ಇಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರ ರಾಹುಲ್ ಖರ್ಗೆ ಅವರು ಏರೋಸ್ಪೇಸ್ ಪಾರ್ಕ್ನಲ್ಲಿ ನ್ಯಾಯಯುತವಾಗಿ ಪಡೆದ 5 ಎಕರೆ ಭೂಮಿಯನ್ನು ಹಗರಣ ಮಾಡಲು ಹೊರಟಿರುವ ಬಿಜೆಪಿ ನಾಯಕರು ಏನು ಮಾಡಿದ್ದಾರೆ? ಎಂದು ವ್ಯಂಗ್ಯವಾಡಿದರು.
ಇವತ್ತು ಮಲ್ಲಿಕಾರ್ಜುನ ಖರ್ಗೆ ಅವರ ಮೇಲೆ ದಲಿತ ನಾಯಕರಾದ ಛಲವಾದಿ ನಾರಾಯಣಸ್ವಾಮಿ ಅವರನ್ನು ಎತ್ತಿಕಟ್ಟಿ ಆರೋಪ ಮಾಡಿಸಲಾಗುತ್ತಿದೆ. ಆದರೆ, ಈ ಹಿಂದೆ ನಾರಾಯಣಸ್ವಾಮಿ ಅವರೇ ಮಂಡ್ಯ ಜಿಲ್ಲೆಗೆ ಸೇರಿದ ಮೈಸೂರಿನ ಹೆಬ್ಬಾಳ ಎರಡನೇ ಹಂತದಲ್ಲಿ ಬೃಂದಾವನ್ ಟೆಕ್ನಾಲಜೀಸ್ ಸಂಸ್ಥೆ ಪ್ರಾರಂಭಿಸುವ ಹೆಸರಿನಲ್ಲಿ ಕೆಎಐಡಿಬಿಯಿಂದ ಎರಡು ಎಕರೆ ಭೂಮಿ ಪಡೆದಿದ್ದಾರೆ. ಆ ನಂತರ ಅಲ್ಲಿ ಬೃಂದಾವನ್ ಟೆಕ್ನಾಲಜೀಸ್ ಪ್ರಾರಂಭಿಸಲಾಗದೆ ಗಾರ್ಮೆಂಟ್ ಪ್ರಾರಂಭಿಸುವುದಾಗಿ ಹೇಳಿದರು. ಆ ನಂತರ ಉಗ್ರಾಣ ಕಟ್ಟುವುದಾಗಿ ಹೇಳಿದರು. ಆ ನಂತರ ಅದೂ ಆಗದೇ ನೆಪ ಮಾತ್ರಕ್ಕೆ ಕಟ್ಟಡ ಕಟ್ಟಿ ಬಾಡಿಗೆ ಕೊಡಲು ಮುಂದಾಗಿದ್ದಾರೆ. ಹೀಗೆ ಪಡೆದ ಭೂಮಿಯಲ್ಲಿ ಒಂದು ಶೆಡ್ ಕಟ್ಟುವ ಯೋಗ್ಯತೆಯೂ ಇಲ್ಲದ ಇವರು ಸತ್ಯ ಹರಿಶ್ಚಂದ್ರನ ತರ ಮಾತನಾಡುತ್ತಿದ್ದಾರೆ ಎಂದ ಅವರು, ಇದೇ ರೀತಿ ಬಿಜೆಪಿ ನಾಯಕ, ಮಾಜಿ ಸಚಿವ ಮುರುಗೇಶ್ ನಿರಾಣಿ ಅವರು ಕೈಗಾರಿಕಾ ಸಚಿವರಾಗಿದ್ದಾಗ ಅಪಾರ ಪ್ರಮಾಣದ ಭೂಮಿಯನ್ನು ಮಂಜೂರು ಮಾಡಿಸಿಕೊಂಡಿದ್ದಾರೆ ಎಂದು ಕಿಡಿಕಾರಿದರು.
ಬಾಗಲಕೋಟೆಯ ನವನಗರದಲ್ಲಿರುವ ಆಗ್ರೋ ಟೆಕ್ ಪಾರ್ಕಿನಲ್ಲಿ ತೇಜಸ್ ಇಂಟರ್ ನ್ಯಾಷನಲ್ ಸ್ಕೂಲ್ ನಿರ್ಮಿಸುವ ಹೆಸರಿನಲ್ಲಿ ತಮ್ಮ ಪುತ್ರನ ಹೆಸರಿನಲ್ಲಿ 25 ಎಕರೆ ಭೂಮಿ ಪಡೆದಿದ್ದಾರೆ. ಅದೇ ರೀತಿ ಮಂಡ್ಯದ ಕೆ.ಆರ್.ಪೇಟೆ ತಾಲ್ಲೂಕಿನ ಬೂಕನಕರೆ ಹೋಬಳಿಯ ಹೊನ್ನೇನಹಳ್ಳಿಯಲ್ಲಿ ಸಕ್ಕರೆ ಕಾರ್ಖಾನೆ ಪ್ರಾರಂಭಿಸುವುದಾಗಿ 200 ಎಕರೆ ಭೂಮಿ ಪಡೆದುಕೊಂಡಿದ್ದಾರೆ. ಹೀಗೆ ಅವರು ಪಡೆದ ಭೂಮಿಯ ಪೈಕಿ 112 ಎಕರೆ ಭೂಮಿ ಮೊದಲು ಬೇರೆಯವರಿಗೆ ಮಂಜೂರಾಗಿದ್ದರೂ ಅದನ್ನು ರದ್ದುಮಾಡಿಸಿ ತಾವು ಪಡೆದುಕೊಂಡಿದ್ದಾರೆ ಎಂದು ಆರೋಪಿಸಿದರು. ತಾವೇ ಕೈಗಾರಿಕಾ ಸಚಿವರಾಗಿ ತಮಗಾಗಿಯೇ ಭೂಮಿ ಪಡೆದಿರುವುದು ತಪ್ಪಲ್ಲವೇ ಎಂದು ಸಚಿವ ಎಂ ಬಿ ಪಾಟೀಲ್ ಪ್ರಶ್ನಿಸಿದರು.
ಇದೇ ರೀತಿ ಬಿಜೆಪಿ ಅಧಿಕಾರದಲ್ಲಿದ್ದಾಗ ದೇವನಹಳ್ಳಿಯ ಬಳಿ ಹೈಟೆಕ್ ಡಿಫೆನ್ಸ್ ಏರೋಸ್ಪೇಸ್ ಜಾಗದಲ್ಲಿ ಚಾಣಕ್ಯ ವಿಶ್ವವಿದ್ಯಾನಿಲಯಕ್ಕೆ 116 ಎಕರೆ ಭೂಮಿ ಮಂಜೂರು ಮಾಡಲಾಗಿದೆ. ಹೈಟೆಕ್ ಡಿಫೆನ್ಸ್ ಏರೋಸ್ಪೇಸ್ ಜಾಗದಲ್ಲಿ ಭೂಮಿ ಪಡೆಯಲು ಚಾಣಕ್ಯ ವಿವಿಗೆ ಇದ್ದ ಅರ್ಹತೆಯಾದರೂ ಏನು? ಎಂದು ಪ್ರಶ್ನಿಸಿದರು.