ಬೆಂಗಳೂರು:ಮೈತ್ರಿಯಾಗಿಯೂ ಲೋಕಸಭಾ ಚುನಾವಣೆಯಲ್ಲಿ ಚನ್ನಪಟ್ಟಣ ಕ್ಷೇತ್ರದಲ್ಲಿ ಮತ ಗಳಿಕೆ ಕಡಿಮೆಯಾಗಿತ್ತು. ಹಿಂದಿನ ಚುನಾವಣೆಗೂ, ಉಪ ಚುನಾವಣೆಯ ಕಾಲಘಟ್ಟದ ಇವತ್ತಿನ ಪರಿಸ್ಥಿತಿ ಬೇರೆ ಇದೆ. ಇದನ್ನು ಅವಲೋಕನ ಮಾಬೇಕಾಗುತ್ತದೆ. ಅದನ್ನು ಬಿಟ್ಟು ಇದು ನನ್ನ ಕ್ಷೇತ್ರ, ನನ್ನ ಹಿಡಿತದಲ್ಲಿದೆ ಅನ್ನೋ ವೈಯಕ್ತಿಕ ಪ್ರತಿಷ್ಠೆಗಳನ್ನ ನಾವೆಲ್ಲ ಬಿಟ್ಟು ಕಾಂಗ್ರೆಸ್ ಅನ್ನು ಎದುರಿಸಬೇಕಾಗಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂ ಗೌಡ ಪರೋಕ್ಷವಾಗಿ ಹೆಚ್ಡಿಕೆಗೆ ಟಕ್ಕರ್ ಕೊಟ್ಟಿದ್ದಾರೆ.
ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಹಜವಾಗಿ ಸಿ.ಪಿ. ಯೋಗೇಶ್ವರ್ ಅವರಿಗೆ ಶಾಸಕ ಆಗುವ ಆಸೆ ಇತ್ತು. ಎನ್‌ಡಿಎಯಿಂದ ಸಿ.ಪಿ. ಯೋಗೇಶ್ವರ್ ಅವರಿಗೆ ಟಿಕೆಟ್ ಸಿಕ್ಕಿದ್ದಿದ್ರೆ ಗೆಲ್ತಿದ್ರು. ಗೆಲ್ಲುವಂಥ ಅಭ್ಯರ್ಥಿಯನ್ನು ಯಾಕೆ ಕಳ್ಕೊಂಡೆವು ಅಂತ ಪರಾಮರ್ಶೆ ಮಾಡ್ತೇವೆ. ನಮ್ಮ ಎನ್‌ಡಿಎ ಮಿತ್ರ ಪಕ್ಷ(ಜೆಡಿಎಸ್) ಸಿಪಿವೈ ಅವರನ್ನು ಬಿಜೆಪಿ ಅಭ್ಯರ್ಥಿ ಮಾಡಲು ಒಪ್ಪಬಹುದಿತ್ತು ಎಂದು ಅಭಿಪ್ರಾಯಪಟ್ಟರು.
ಯೋಗೇಶ್ವರ್ ಅನಿವಾರ್ಯ ಕಾರಣ, ವೈಯಕ್ತಿಕ ಕಾರಣದಿಂದ ಪಕ್ಷ ತೊರೆದಿದ್ದಾರೆ, ಅವರು ನಮ್ಮ ಪಕ್ಷದ ನಿರೀಕ್ಷೆ ಹುಸಿ ಮಾಡಿ ಪಕ್ಷ ತೊರೆದು ಹೋಗಿದ್ದಾರೆ. ಚನ್ನಪಟ್ಟಣದಲ್ಲಿ ಶಾಸಕರಾಗಬೇಕೆಂಬ ಅಪೇಕ್ಷೆ ಅವರಿಗಿತ್ತು. ಯಾವ ಕಾರಣಕ್ಕೆ ಬಿಜೆಪಿಯಿಂದ ಸ್ಪರ್ಧಿಸಲು ಸಿಪಿವೈ ಅವರಿಗೆ ಕುಮಾರಸ್ವಾಮಿ ಅವಕಾಶ ಕೊಡಲಿಲ್ವೋ ಗೊತ್ತಿಲ್ಲ, ಇದರ ಬಗ್ಗೆ ನಾನು ಮಾತಾಡಲ್ಲ. ಆದರೆ ಚನ್ನಪಟ್ಟಣದಲ್ಲಿ ಗೆಲ್ಲುವಂತಹ ಅಭ್ಯರ್ಥಿ ಯೋಗೇಶ್ವರ್ ಆಗಿದ್ದರು ಎಂದು ಹೇಳಿದರು.