ಕರ್ನಾಟಕ

karnataka

ETV Bharat / state

ಅಡ್ಡ ಮತದಾನ: ಶಾಸಕ ಎಸ್.ಟಿ.ಸೋಮಶೇಖರ್ ವಿರುದ್ಧ ಬಿಜೆಪಿ-ಜೆಡಿಎಸ್ ಪ್ರತಿಭಟನೆ - ಅಡ್ಡ ಮತದಾನ

ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡ ಮತ ಹಾಕಿದ ಶಾಸಕ ಎಸ್.ಟಿ.ಸೋಮಶೇಖರ್ ವಿರುದ್ಧ ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿದರು.

BJP JDS protest  cross vote  MLA ST Somashekhar  ಅಡ್ಡ ಮತದಾನ  ಬಿಜೆಪಿ ಜೆಡಿಎಸ್ ಪ್ರತಿಭಟನೆ
ಬಿಜೆಪಿ-ಜೆಡಿಎಸ್ ಪ್ರತಿಭಟನೆ

By ETV Bharat Karnataka Team

Published : Feb 27, 2024, 8:22 PM IST

ಬಿಜೆಪಿ-ಜೆಡಿಎಸ್ ಪ್ರತಿಭಟನೆ

ಬೆಂಗಳೂರು:ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿರುವ ಬಿಜೆಪಿ ಶಾಸಕ ಎಸ್.​ಟಿ.ಸೋಮಶೇಖರ್ ವಿರುದ್ಧ ಬಿಜೆಪಿ ಹಾಗು ಜೆಡಿಎಸ್ ಕಾರ್ಯಕರ್ತರು ನಗರದಲ್ಲಿ ಇಂದು ಬೃಹತ್ ಪ್ರತಿಭಟನೆ ನಡೆಸಿದರು. ಸೋಮಶೇಖರ್ ಕಾಂಗ್ರೆಸ್ ಪಕ್ಷಕ್ಕೆ ಅಡ್ಡಮತ ಹಾಕಿದರು ಎಂಬ ಸುದ್ದಿ ಹೊರಬೀಳುತ್ತಿದ್ದಂತೆ ರೊಚ್ಚಿಗೆದ್ದು ಜೆಡಿಎಸ್ ನಗರ ಘಟಕದ ಅಧ್ಯಕ್ಷ ಹೆಚ್.ಎಂ.ರಮೇಶ್ ಗೌಡ ನೇತೃತ್ವದಲ್ಲಿ ಪ್ರತಿಭಟಿಸಿದರು. ಬಿಜೆಪಿಯಿಂದ ಗೆದ್ದಿದ್ದ ಸೋಮಶೇಖರ್ ರಾಜಕೀಯ ಸ್ವಾರ್ಥಕ್ಕಾಗಿ ಪಕ್ಷಕ್ಕೆ ದ್ರೋಹ ಎಸಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

'₹25 ಕೋಟಿ ಪಡೆದ ಎಸ್​.ಟಿ.ಸೋಮಶೇಖರ್'-ಆರೋಪ: ಈ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ರಮೇಶ್ ಗೌಡ, ಶಾಸಕ ಎಸ್.​ಟಿ.ಸೋಮಶೇಖರ್ ಅವರನ್ನು ಪಕ್ಷಾಂತರ ನಿಷೇಧ ಕಾಯ್ದೆ ಅಡಿಯಲ್ಲಿ ವಿಧಾನಸಭೆ ಸ್ಪೀಕರ್ ಅನರ್ಹಗೊಳಿಸಬೇಕು. ಅಡ್ಡಮತ ಹಾಕಲು ಅವರು ಕಾಂಗ್ರೆಸ್​ನಿಂದ 25 ಕೋಟಿ ರೂಪಾಯಿ ಹಣ ಪಡೆದಿದ್ದಾರೆ ಎಂದು ಆರೋಪಿಸಿದರು. ಒಂದು ವೇಳೆ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸದಿದ್ದರೆ ಕಾನೂನಾತ್ಮಕವಾಗಿ ಹೋರಾಟ ನಡೆಸಲಾಗುವುದು. ನಾಳೆಯಿಂದಲೇ ಬೆಂಗಳೂರು ನಗರದ ಎಲ್ಲಾ ವಿಧಾನಸಭೆ ಕ್ಷೇತ್ರಗಳಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು. ಇದೇ ವೇಳೆ ಸೋಮಶೇಖರ್ ಪ್ರತಿಕೃತಿಯನ್ನು ದಹಿಸಲಾಯಿತು. ಕೆಲವು ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು.

ಎಸ್.ಟಿ.ಸೋಮಶೇಖರ್ ವಿರುದ್ಧ ಜೆಡಿಎಸ್ ಪ್ರತಿಭಟನೆ

ಬಿಜೆಪಿ ಪ್ರತಿಭಟನೆ:ಪಕ್ಷದ ವಿರುದ್ಧ ಮತ ಚಲಾಯಿಸಿದ ಶಾಸಕ ಎಸ್.ಟಿ.ಸೋಮಶೇಖರ್ ವಿರುದ್ಧ ಬಿಜೆಪಿ ಕಾರ್ಯಕರ್ತರು ಯಶವಂತಪುರ ಬಿಜೆಪಿ ಮಂಡಲ ಕಚೇರಿ ಬಳಿ ಪ್ರತಿಭಟಿಸಿದರು. ವಿಧಾನಸಭೆಯಲ್ಲಿ ನಡೆದ ಮತದಾನದಲ್ಲಿ ಪಾಲ್ಗೊಂಡಿದ್ದ ಸೋಮಶೇಖರ್ ಬಿಜೆಪಿ ವಿಪ್ ಉಲ್ಲಂಘಿಸಿ ಅಡ್ಡ ಮತದಾನ ಮಾಡಿರುವುದು ಬಹಿರಂಗಗೊಳ್ಳುತ್ತಿದ್ದಂತೆ ಕ್ಷೇತ್ರದ ಕಾರ್ಯಕರ್ತರು ಅಸಮಾಧಾನ ಹೊರಹಾಕಿದರು. ಮಂಡಲ ಕಚೇರಿ ಎದುರು ಹಾಕಲಾಗಿದ್ದ ಫಲಕದಲ್ಲಿದ್ದ ಸೋಮಶೇಖರ್ ಭಾವಚಿತ್ರಕ್ಕೆ ಕಪ್ಪು ಮಸಿ ಬಳಿದರು. ಭಾವಚಿತ್ರಕ್ಕೆ ರೆಡ್ ಮಾರ್ಕ್ ಹಾಕಿದರು. ರಸ್ತೆ ತಡೆ ನಡೆಸಿ ಟೈಯರ್‌ಗಳಿಗೆ ಬೆಂಕಿ ಹಚ್ಚಿದರು.

ಎಸ್.ಟಿ.ಸೋಮಶೇಖರ್ ವಿರುದ್ಧ ಬಿಜೆಪಿ ಪ್ರತಿಭಟನೆ

ಕಳೆದ ವಿಧಾನಸಭಾ ಚುನಾವಣೆಯಿಂದಲೂ ಯಶವಂತಪುರ ಬಿಜೆಪಿ ಕಾರ್ಯಕರ್ತರು ಮತ್ತು ಶಾಸಕ ಸೋಮಶೇಖರ್ ನಡುವೆ ಮುಸುಕಿನ ಗುದ್ದಾಟ ನಡೆದುಕೊಂಡು ಬಂದಿತ್ತು. ಸೋಮಶೇಖರ್ ಅಸಮಾಧಾನ ಹೊರಹಾಕಿದರೂ ಪಕ್ಷದ ನಾಯಕರ ಸೂಚನೆಯಂತೆ ಕಾರ್ಯಕರ್ತರು ಮೌನವಾಗಿದ್ದರು. ಆದರೆ ಇಂದು ಅಡ್ಡ ಮತದಾನ ಮಾಡಿರುವುದನ್ನು ಖಂಡಿಸಿ ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದ್ದಾರೆ.

ಇದನ್ನೂ ಓದಿ:ಬಿಜೆಪಿ ಶಾಸಕನಿಂದ ಅಡ್ಡಮತದಾನ?, ನಾನು ಆತ್ಮ ಸಾಕ್ಷಿಯಿಂದ ಮತ ಹಾಕಿದ್ದೇನೆ: ಎಸ್.ಟಿ.ಸೋಮಶೇಖರ್

ABOUT THE AUTHOR

...view details