ಬೆಂಗಳೂರು: ಮುಸ್ಲಿಂ ಬಾಂಧವರಿಗೆ ಮಾನಸಿಕವಾಗಿ ಚಿತ್ರಹಿಂಸೆ ಕೊಟ್ಟು, ದೇಶಬಿಟ್ಟು ಓಡಿ ಹೋಗಬೇಕೆಂದು ಮಾಡ್ತಿದ್ದಾರೆ. ಆದರೆ ಇದು ಸರ್ವಜನಾಂಗದ ಶಾಂತಿಯ ತೋಟ. ಕರ್ನಾಟಕ ಶಾಂತಿಯಿಂದ ಇದೆ, ಕ್ರಿಮಿನಲ್ ಆ್ಯಕ್ಟಿವಿಟಿಯನ್ನು ಬೆಂಬಲಿಸೋದಿಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು. ಸದಾಶಿವನಗರ ತಮ್ಮ ನಿವಾಸದಲ್ಲಿಂದು ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.
ಬಿಜೆಪಿ ಪ್ರತಿಭಟನೆ ವಿಚಾರವಾಗಿ ಪ್ರತಿಕ್ರಿಯಿಸಿ, ಪಾಪ ಅವರುಗಳು ಯಾವ ಕೆಲಸವನ್ನೂ ಮಾಡಿಲ್ಲವಲ್ಲ. ಅದಕ್ಕೆ ಈ ವಿಚಾರದ ಬಗ್ಗೆ ಮಾತನಾಡುತ್ತಿದ್ದಾರೆ. ಈ ರಾಜ್ಯದಲ್ಲಿ ಡಬಲ್ ಇಂಜಿನ್ ಸರ್ಕಾರ ಫೇಲ್ ಆಯಿತು. ಈಗ ದೊಡ್ಡ ಇಂಜಿನ್ ಕೂಡ ಫೇಲ್ ಆಗುತ್ತದೆ. ನಮ್ಮ ಖಾಲಿ ಚೊಂಬು ಜಾಹೀರಾತಿನಿಂದ ಪ್ರತಿಪಕ್ಷಗಳ ನಾಯಕರು ಎಚ್ಚರಗೊಂಡಿದ್ದಾರೆ. ಬಿಜೆಪಿಯವರು ಜಾಹೀರಾತು ನೀಡಿದ್ದು, ನಮ್ಮ ಜನರಿಗೆ ಯಾವುದು ಸರಿ, ಯಾವುದು ತಪ್ಪು ಎಂದು ಯೋಚನೆ ಮಾಡುವ ಶಕ್ತಿ, ಪ್ರಜ್ಞೆ ಎರಡೂ ಇದೆ ಎಂದರು.
ಇಂದಿನ ಪತ್ರಿಕೆಗಳಲ್ಲಿ ಕಾಂಗ್ರೆಸ್ ಪಕ್ಷದ ವಿರುದ್ಧ ಬಿಜೆಪಿ ನೀಡಿರುವ ಜಾಹೀರಾತಿನ ಬಗ್ಗೆ ಪ್ರತಿಕ್ರಿಯಿಸಿ, ಕರ್ನಾಟಕದ ಜನರಿಗೆ ಬಿಜೆಪಿ ಬಹಳ ಅನ್ಯಾಯ ಮಾಡಿದೆ ಎಂದು ಈ ಹಿಂದೆ ದೇವೇಗೌಡರು, ಕುಮಾರಸ್ವಾಮಿ ಇಬ್ಬರೂ ಭಾಷಣ ಮಾಡಿದ್ದರು. 15 ಲಕ್ಷ ಹಣ ಎಷ್ಟು ಜನರ ಖಾತೆಗೆ ಹೋಗಿದೆ. ಎಷ್ಟು ಉದ್ಯೋಗ ಸಿಕ್ಕಿದೆ ಎಂದು ನಾನು, ಸಿದ್ದರಾಮಯ್ಯ ಹಾಗೂ ಎಲ್ಲಾ ನಾಯಕರು ಪ್ರಶ್ನೆ ಮಾಡುತ್ತಿದ್ದಾರೆ. ಇದಕ್ಕೆ ಮೊದಲು ಉತ್ತರಿಸಲಿ ಎಂದು ತಿರುಗೇಟು ನೀಡಿದರು.
ಬಿಜೆಪಿಯವರು ಚಿಪ್ಪು ಅಭಿಯಾನ ನಡೆಸುತ್ತಿರುವ ವಿಚಾರವಾಗಿ ಪ್ರತಿಕ್ರಿಯಿಸಿ, ನಾವು ಚಿಪ್ಪು ಕೊಟ್ಟಿಲ್ಲ. ಕನ್ನಡದ ಬಾವುಟ ಹಿಡಿದು ಹೋರಾಟ ಮಾಡುವವರು ನಾವು. ಕನ್ನಡಿಗರ ಪರವಾಗಿ ನಮ್ಮ ತೆರಿಗೆ, ನಮ್ಮ ಹಕ್ಕು ಹೋರಾಟ ಮಾಡಿದ್ದೇವೆ ಎಂದರು. ಕಾಂಗ್ರೆಸ್ನಿಂದ ಮುಸ್ಲಿಂ ತುಷ್ಟೀಕರಣ ರಾಜಕಾರಣ ನಡೆಯುತ್ತಿದೆ ಟೀಕೆ ಬಗ್ಗೆ ಮಾತನಾಡಿ, ಪ್ರಧಾನಿಗಳು ಈ ದೇಶದ ಮಹತ್ವದ ಹುದ್ದೆಯಲ್ಲಿ ಕುಳಿತಿರುವವರು. ಸಂವಿಧಾನವನ್ನು ಕೈಯಲ್ಲಿ ಹಿಡಿದು ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ಅವರಿಗೆ ಈ ದೇಶದ ಎಲ್ಲಾ ನಾಗರಿಕರು ಸಮಾನರು ಎನ್ನುವ ಅರಿವು ಇರಬೇಕು. ಬೇಧ, ಭಾವ ಮಾಡುವುದು ಅವರ ಹುದ್ದೆಗೆ ಶೋಭೆ ತರುವುದಿಲ್ಲ. ಇದು ಇಡೀ ದೇಶ ಮತ್ತು ಪ್ರಪಂಚಕ್ಕೆ ಕೆಟ್ಟ ಸಂದೇಶವನ್ನು ನೀಡಿದಂತಾಗುತ್ತದೆ ಎಂದು ಹೇಳಿದರು.
ಇದನ್ನೂ ಓದಿ:ವಿದ್ಯಾರ್ಥಿನಿ ನೇಹಾ ಹತ್ಯೆ ರಾಜ್ಯವೇ ತಲೆತಗ್ಗಿಸುವಂತಹ ಪ್ರಕರಣ: ಆರ್.ಅಶೋಕ್ - Neha Murder Case