ಮೈಸೂರು: ''ಸಚಿವರಾಗಿ ಕಾರ್ಯ ನಿರ್ವಹಿಸುತ್ತಿದ್ದು, ಪಕ್ಷದ ಕಾರ್ಯಾಧ್ಯಕ್ಷ ಸ್ಥಾನ ಬದಲಾಗಬಹುದು, ಇದರ ಬಗ್ಗೆ ಮಾಹಿತಿ ಇಲ್ಲ'' ಎಂದು ಸಚಿವ ಈಶ್ವರ ಖಂಡ್ರೆ ಹೇಳಿದರು.
ನಗರದಲ್ಲಿ ಜಿಲ್ಲಾ ಕಾಂಗ್ರೆಸ್ನಿಂದ ಹಮ್ಮಿಕೊಂಡಿದ್ದ ಪ್ರತಿಭಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ, ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ''ಸಚಿವರಾದ ಬಳಿಕ ಪಕ್ಷ ಸಂಘಟನೆಗೆ ಹೆಚ್ಚು ಒತ್ತು ಕೊಡಲು ಆಗುತ್ತಿಲ್ಲ. ಆದ್ದರಿಂದ ಕಾರ್ಯಾಧ್ಯಕ್ಷ ಸ್ಥಾನ ಬದಲಾಗಬಹುದು. ಇದರ ಬಗ್ಗೆ ಮಾಹಿತಿ ಇಲ್ಲ'' ಎಂದರು. ''ಮೈಸೂರು ಭಾಗದಲ್ಲಿ ಮಾನವ ಮತ್ತು ಕಾಡುಪ್ರಾಣಿಗಳ ಸಂಘರ್ಷದ ವಿಚಾರದ ಬಗ್ಗೆ ಅಧಿಕಾರಿಗಳ ಸಭೆ ನಡೆಸಿ ಮಾಹಿತಿ ಪಡೆಯುತ್ತೇನೆ. ಮಾನವ ಮತ್ತು ಕಾಡು ಪ್ರಾಣಿಗಳ ಸಂಘರ್ಷಕ್ಕೆ ಶಾಶ್ವತ ಪರಿಹಾರ ಕಂಡುಹಿಡಿಯಲಾಗುವುದು ಎಂದು ಅವರು ತಿಳಿಸಿದರು.
ರಾಮ ನಮ್ಮ ಮನಸ್ಸಿನಲ್ಲಿ ಇದ್ದಾನೆ:''ಅಯೋಧ್ಯೆ ವಿಚಾರದಲ್ಲಿ ಸಿದ್ದರಾಮಯ್ಯ ಅವರನ್ನ ಟೀಕಿಸುವ ನೈತಿಕತೆ ಬಿಜೆಪಿಯವರಿಗೆ ಇಲ್ಲ. ಸಿದ್ದರಾಮಯ್ಯ ನಾನು ಆಸ್ತಿಕ, ನಾಸ್ತಿಕನಲ್ಲ ಎಂದು ಹೇಳಿದ್ದಾರೆ. ಅವರು ನಾಸ್ತಿಕನಾಗಿದ್ದರೆ ಕ್ಷೇತ್ರದಲ್ಲಿ ರಾಮ ಮಂದಿರ ಕಟ್ಟುತ್ತಿರಲಿಲ್ಲ. ದೇವಾಲಯಗಳಿಗೆ ಅನುದಾನ ನೀಡುತ್ತಿರಲಿಲ್ಲ. ರಾಜ್ಯದ ಆನೇಕ ದೇವಾಲಯಗಳಿಗೆ ಸಿದ್ದರಾಮಯ್ಯ ಅನುದಾನ ನೀಡಿದ್ದಾರೆ. ಸುಳ್ಳು ಹೇಳುವುದರಲ್ಲಿ ಬಿಜೆಪಿಯವರು ನಿಸ್ಸಿಮರು, ರಾಮ ನಮ್ಮ ಮನಸ್ಸಿನಲ್ಲಿ ಇದ್ದಾನೆ'' ಎಂದು ಸಚಿವ ಈಶ್ವರ ಖಂಡ್ರೆ ಹೇಳಿಕೆ ನೀಡಿದರು.
ಡಿಸಿಎಂ ಆಕೆಯ ವಿಚಾರ ಅಪ್ರಸ್ತುತ:''ರಾಜ್ಯದಲ್ಲಿ ಮೂರು ಡಿಸಿಎಂಗಳನ್ನು ಸೃಷ್ಟಿ ಮಾಡಬೇಕು ಎಂಬ ಸಚಿವ ಕೆ.ಎನ್. ರಾಜಣ್ಣ ಹೇಳಿಕೆ ಈಗ ಅಪ್ರಸ್ತುತ. ಈ ಬಗ್ಗೆ ಹೈ ಕಮಾಂಡ್ ತೀರ್ಮಾನ ಮಾಡುತ್ತದೆ. ಬೇರೆಯವರು ಯಾರೂ ಈ ಬಗ್ಗೆ ಮಾತನಾಡಬಾರದು. ಹೈಕಮಾಂಡ್ ಹೇಳಿದ ಮೇಲೆ ಯಾರು ತುಟಿಕ್ ಪಿಟಿಕ್ ಅನ್ನುವಂತಿಲ್ಲ. ಈಗ ಡಿಸಿಎಂ ಆಯ್ಕೆ ಅಪ್ರಸ್ತುತ'' ಎಂದ ಸಚಿವರು, ಅಸ್ಸೋಂನಲ್ಲಿ ರಾಹುಲ್ ಗಾಂಧಿ ನ್ಯಾಯ ಯಾತ್ರೆಗೆ ತಡೆ ಯತ್ನ ವಿಚಾರದ ಬಗ್ಗೆ ಮಾತನಾಡಿದ ಸಚಿವರು, ''ಗೂಂಡಾಗಳಿಗೆ ಬಡಿಗೆ ನೀಡಿ ಯಾತ್ರೆ ನಿಲ್ಲಿಸಲು ಯತ್ನಿಸಿದ್ದಾರೆ. ಯಾತ್ರೆ ಸಂದರ್ಭದಲ್ಲಿ ಮೋದಿ ಮತ್ತು ಶ್ರೀರಾಮನಿಗೆ ಜೈಕಾರ ಕೂಗಿ ಪ್ರಚೋದಿಸಲು ಯತ್ನಿಸಿದ್ದಾರೆ. ಆದರೆ, ಯಾವುದೇ ಕಾರಣಕ್ಕೂ ರಾಹುಲ್ ಗಾಂಧಿಯವರ ಯಾತ್ರೆ ನಿಲ್ಲುವುದಿಲ್ಲ. ಬಿಜೆಪಿಯವರ ಆಟ ನಡೆಯುವುದಿಲ್ಲ'' ಎಂದು ಸಚಿವ ಈಶ್ವರ ಖಂಡ್ರೆ ಹೇಳಿಕೆ ನೀಡಿದರು.