ಬೆಂಗಳೂರು:ರಾಜ್ಯಾಧ್ಯಕ್ಷ ಸ್ಥಾನ, ಪ್ರತಿಪಕ್ಷ ನಾಯಕ ಸ್ಥಾನ ಸಿಗದೇ ಕುಪಿತಗೊಂಡಿರುವ ಶಾಸಕ ಬಸನಗೌಡ ಪಾಟೀಲ್, ರಾಜ್ಯಾಧ್ಯಕ್ಷ ಸ್ಥಾನ ವಂಚಿತ ನಾಯಕ ವಿ.ಸೋಮಣ್ಣ ಇಂದಿನ ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸಭೆಯಿಂದ ದೂರ ಉಳಿಯುವ ಮೂಲಕ ರಾಜ್ಯ ನಾಯಕರ ಮೇಲಿನ ಮುನಿಸನ್ನು ಮತ್ತೆ ವ್ಯಕ್ತಪಡಿಸಿದ್ದಾರೆ. ಮತ್ತಷ್ಟು ರೆಬಲ್ ನಾಯಕರು ಸಭೆಗೆ ಬಾರದೇ ಅಸಮಾಧಾನ ಹೊರಹಾಕಿದ್ದಾರೆ.
ಬಸನಗೌಡ ಪಾಟೀಲ್ ಯತ್ನಾಳ್ ಗೈರು:ವಿಜಯೇಂದ್ರ ನಾಯಕತ್ವ ನಂತರ ಉತ್ತರ ಕರ್ನಾಟಕಕ್ಕೆ ಉನ್ನತ ಹುದ್ದೆ ನೀಡುತ್ತಿಲ್ಲ ಎಂದು ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಇಂದಿನ ರಾಜ್ಯ ಕಾರ್ಯಕಾರಿಣಿ ಸಭೆಗೆ ಆಗಮಿಸಲಿಲ್ಲ. ಯಡಿಯೂರಪ್ಪ ಕುಟಂಬದ ವಿರುದ್ಧ ಬುಸುಗುಟ್ಟುತ್ತಲೇ ಬರುತ್ತಿರುವ ಯತ್ನಾಳ್ ಅವರು ವಿಜಯೇಂದ್ರ ರಾಜ್ಯಾಧ್ಯಕ್ಷ ಆದ ನಂತರ ಮತ್ತಷ್ಟು ಕುಪಿತರಾಗಿದ್ದು, ನಿರೀಕ್ಷೆಯಂತೆ ಸಭೆಗೆ ಗೈರಾಗಿ ತಮ್ಮ ಮುನಿಸನ್ನು ಬಹಿರಂಗಪಡಿಸಿದ್ದಾರೆ.
ಸೋಮಣ್ಣ ಮುನಿಸು:ಇನ್ನು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಕೇಳಿದ್ದ ಹಿರಿಯ ನಾಯಕ ಸೋಮಣ್ಣ ಅವಕಾಶ ಸಿಗದೆ ಮುನಿಸಿಕೊಂಡಿದ್ದಾರೆ. ಪಕ್ಷದ ಕಾರ್ಯಕ್ರಮಗಳಿಂದ ಅಂತರ ಕಾಯ್ದುಕೊಂಡಿದ್ದಾರೆ. ಇತ್ತೀಚೆಗಷ್ಟೇ ದೆಹಲಿಗೆ ತೆರಳಿ ಹೈಕಮಾಂಡ್ ನಾಯಕರ ಭೇಟಿ ಮಾಡಿ ಮಾತುಕತೆ ನಡೆಸಿ ಬಂದು ಎಲ್ಲವೂ ಸರಿಯಾಗಿದೆ ಎಂದು ಸಂತಸದಿಂದಲೇ ಹೇಳಿದ್ದರು. ಅಶೋಕ್ ಜೊತೆ ಓಡಾಟ ನಡೆಸಿದ್ದರು. ಆದರೂ ಇಂದಿನ ಸಭೆಯಿಂದ ದೂರ ಉಳಿದು ಮತ್ತೆ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಶಾಸಕ ಎಸ್ ಟಿ ಸೋಮಶೇಖರ್: ಯಶವಂತಪುರ ಬಿಜೆಪಿ ಶಾಸಕ ಎಸ್ ಟಿ ಸೋಮಶೇಖರ್ ಆರು ತಿಂಗಳಿನಿಂದಲೂ ಸಿಎಂ, ಡಿಸಿಎಂ ಜೊತೆ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡು ಬಿಜೆಪಿಯಿಂದ ಅಂತರ ಕಾಯ್ದುಕೊಂಡಿದ್ದು, ಇಂದಿನ ಸಭೆಗೆ ಗೈರಾಗಿ, ನನಗೆ ಆಹ್ವಾನ ಇರಲಿಲ್ಲ ಹಾಗಾಗಿ ಹೋಗಿಲ್ಲ ಎಂದಿದ್ದಾರೆ. ಆದರೆ ಅವರಿಗೂ ಆಹ್ವಾನ ನೀಡಲಾಗಿತ್ತು ಎಂದು ಬಿಜೆಪಿ ನಾಯಕರು ಸ್ಪಷ್ಟೀಕರಣ ನೀಡಿದ್ದಾರೆ. ಹಾಗಾಗಿ ಸೋಮಶೇಖರ್ ಉದ್ದೇಶಪೂರ್ವಕ ಗೈರಾಗಿದ್ದಾರಾ ಎನ್ನುವ ಪ್ರಶ್ನೆ ಎದ್ದಿದೆ.