ಕೊಪ್ಪಳ : ಕೊಪ್ಪಳದ ಪ್ರತಿಭೆ ಈಗ ವಿಶ್ವಖ್ಯಾತಿ ಗಳಿಸಿದೆ. ಗ್ರಾಮೀಣ ಹಾಗೂ ಪುರಾತನ ಕಲೆಯನ್ನು ವಿಶ್ವಕ್ಕೆ ಪರಿಚಯಿಸಿದ 96 ರ ಅಜ್ಜಿಗೆ ದೇಶದ ಅತ್ಯುನ್ನತ ಗೌರವ ಪದ್ಮ ಶ್ರೀ ಪ್ರಶಸ್ತಿ ಒಲಿದು ಬಂದಿದೆ. ತಾಲೂಕಿನ ಮೋರನಾಳ ಗ್ರಾಮದ ತೊಗಲುಗೊಂಬೆ ಕಲಾವಿದೆ ಭೀಮವ್ವ ದೊಡ್ಡಬಾಳಪ್ಪ ಶಿಳ್ಳೇಕ್ಯಾತರ ಅವರಿಗೆ 2025ರ ಪದ್ಮಶ್ರೀ ಪ್ರಶಸ್ತಿ ನೀಡಿ ಕೇಂದ್ರ ಸರ್ಕಾರ ಗೌರವಿಸಿದೆ.
ಭೀಮವ್ವಳ ಹಿನ್ನೆಲೆ: ಭೀಮವ್ವ ತನ್ನ 14ನೇ ವಯಸ್ಸಿನಿಂದ ಇಲ್ಲಿಯವರೆಗೂ ತೊಗಲುಗೊಂಬೆಯಾಟವನ್ನು ಕುಲಕಸುಬಾಗಿ ಮಾಡಿಕೊಂಡು ಬಂದಿದ್ದಾರೆ. ಕೊಪ್ಪಳ ತಾಲೂಕಿನ ಕುಗ್ರಾಮ ಮೋರನಾಳ ಗ್ರಾಮದಲ್ಲಿ 1929ರಲ್ಲಿ ಜನಿಸಿದ ಭೀಮವ್ವ ಶಿಳ್ಳೆಕ್ಯಾತರ, ಅನಕ್ಷರಸ್ಥೆಯಾದರೂ ವಂಶಪಾರಂಪರ್ಯವಾಗಿ ಬಂದ ತೊಗಲುಗೊಂಬೆಯಾಟ ಕಲೆಯನ್ನು ಉಳಿಸಿಕೊಂಡು ಬಂದಿದ್ದಾರೆ. ಇಡೀ ಜಿಲ್ಲೆಯಲ್ಲಿ ಇದೊಂದೇ ಕುಟುಂಬ ನೂರಾರು ವರ್ಷಗಳಿಂದ ತೊಗಲುಗೊಂಬೆಯಾಟವನ್ನು ಪ್ರದರ್ಶಿಸುತ್ತಾ ಬಂದಿದೆ. ಇವರ ಮನೆಯಲ್ಲಿ ಚಿಕ್ಕ ಮಕ್ಕಳಿಂದ ಹಿಡಿದು ಅಜ್ಜಿ ಭೀಮವ್ವ ಸಹ ಗೊಂಬೆಯಾಟ ಪ್ರದರ್ಶನಕ್ಕೆ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದಾರೆ.
ಕುಟುಂಬದವರಿಗೆ ತರಬೇತಿ: ಭೀಮವ್ವ ಶಿಳ್ಳೆಕ್ಯಾತರ ಹೆಚ್ಚು ಪೌರಾಣಿಕ ಕಥೆ ಆಧಾರಿತ ರಾಮಾಯಣ, ಕುರುಕ್ಷೇತ್ರ, ವಿರಾಟ ಪರ್ವ, ಲವಕುಶ ಕಾಳಗ, ಕರ್ಣಪರ್ವ, ದ್ರೌಪದಿ ವಸ್ತ್ರಾಪಹರಣ, ಆದಿಪರ್ವ ಸೇರಿ ಮಹಾಭಾರತದ 18 ಪರ್ವಗಳನ್ನು ಪ್ರದರ್ಶಿಸುತ್ತಾರೆ. ತಮ್ಮ ಕುಟುಂಬದವರಿಗೆ ಇಂದಿಗೂ ಗೊಂಬೆಯಾಟ ತರಬೇತಿ ನೀಡುತ್ತಿದ್ದಾರೆ. ಭೀಮವ್ವ ಶಿಳ್ಳೆಕ್ಯಾತರ ಅವರ ಸೇವೆ ಗುರುತಿಸಿ ಸಂಘ - ಸಂಸ್ಥೆಗಳು ಅನೇಕ ಗೌರವ ಪ್ರಶಸ್ತಿಗಳನ್ನು ನೀಡಿವೆ. ಭೀಮವ್ವ ಮಗ ಕೇಶಪ್ಪ ಶಿಳ್ಳೆಕ್ಯಾತರ ಹಾಗೂ ಇವರ ಮಕ್ಕಳು ಸೇರಿ ಒಟ್ಟು 6 ಜನರು ಜನರು ಗೊಂಬೆಯಾಟದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.
ಎಲ್ಲೆಲ್ಲಿ ಪ್ರದರ್ಶನ? : ಅಂತಾರಾಷ್ಟ್ರೀಯ ಕ್ಯಾತಿ ಪಡೆದಿರುವ ಭೀಮವ್ವ ಶಿಳ್ಳೆಕ್ಯಾತರ ಅಮೆರಿಕ, ಪ್ಯಾರಿಸ್, ಇಟಲಿ, ಇರಾನ್, ಇರಾಕ್, ಸ್ವಿಟ್ಜರ್ಲೆಂಡ್, ಹಾಲೆಂಡ್ ಮುಂತಾದ ದೇಶಗಳಲ್ಲಿ ರಾಮಾಯಣ ಮಹಾಭಾರತದಂತಹ ಮಹಾಕಾವ್ಯಗಳನ್ನು ಹಾಗೂ ಪ್ರಸ್ತುತ ವಿದ್ಯಮಾನಗಳನ್ನು ತೊಗಲುಗೊಂಬೆಯಾಟದ ಮೂಲಕ ಪ್ರದರ್ಶನ ನೀಡಿ ಮೆಚ್ಚುಗೆ ಪಡೆದಿದ್ದಾರೆ.
ಭೀಮವ್ವ ಶಿಳ್ಳೆಕ್ಯಾತರ ಸಾಧನೆಯನ್ನು ಕಂಡು ಸರ್ಕಾರವು ಅವರಿಗೆ ಅನೇಕ ಪ್ರಶಸ್ತಿಗಳನ್ನು ನೀಡಿ ಗೌರವಿಸಿದೆ. 1993ರಲ್ಲಿ ತೆಹರಾನ್‌ನಲ್ಲಿ ಬೊಂಬೆ ಉತ್ಸವ ಪ್ರಶಸ್ತಿ, 63ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಪ್ರಶಸ್ತಿ, ಪ್ರಾದೇಶಿಕ ರಂಗ ಕಲೆಗಳ ಅಧ್ಯಯನ ಪ್ರಶಸ್ತಿ, 2005-06ನೇ ಸಾಲಿನಲ್ಲಿ ಜಾನಪದ ಮತ್ತು ಬಯಲಾಟ ಅಕಾಡೆಮಿ ಪ್ರಶಸ್ತಿ, 2010ರಲ್ಲಿ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, 2014ರಲ್ಲಿ ರಾಜ್ಯೋತ್ಸವ ಪ್ರಶಸ್ತಿ, 2020-21ನೇ ಸಾಲಿನ ಜಾನಪದ ಶ್ರೀ ಪ್ರಶಸ್ತಿ, 2022ರಲ್ಲಿ ಹಿರಿಯ ನಾಗರಿಕ ಪ್ರಶಸ್ತಿ ಹೀಗೆ ಅನೇಕ ಪ್ರಶಸ್ತಿ-ಪುರಸ್ಕಾರಗಳು ಇವರಿಗೆ ಲಭಿಸಿವೆ.
ಸಚಿವ ಶಿವರಾಜ್ ತಂಗಡಗಿ ಅಭಿನಂದನೆ: ದೇಶದ ಅತ್ಯುನ್ನತ ನಾಗರಿಕ ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆಯಾಗಿರುವ ನಮ್ಮ ನಾಡಿನ ಹಿರಿಯ ಕಲಾವಿದರಾದ ಕೊಪ್ಪಳ ಜಿಲ್ಲೆಯ ಭೀಮವ್ವ ದೊಡ್ಡಬಾಳಪ್ಪ ಶಿಳ್ಳೇಕ್ಯಾತ, ಬಾಗಲಕೋಟೆಯ ಗೊಂದಳಿ ಕಲಾವಿದ ವೆಂಕಪ್ಪ ಅಂಬಾಜಿ ಸುಗಟೇಕರ್ ಹಾಗೂ ಖ್ಯಾತ ವೈದ್ಯೆ ವಿಜಯಲಕ್ಷ್ಮಿ ದೇಶಮಾನೆ ಅವರಿಗೆ ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ್ ತಂಗಡಗಿ ಅಭಿನಂದನೆ ಸಲ್ಲಿಸಿದ್ದಾರೆ.
ನಮ್ಮದೇ ಕೊಪ್ಪಳ ಜಿಲ್ಲೆಯವರಾದ ಭೀಮವ್ವ ದೊಡ್ಡಬಾಳಪ್ಪ ಅವರಿಗೆ ಪ್ರಶಸ್ತಿ ಲಭಿಸಿರುವುದು ಹೆಮ್ಮೆಯ ಸಂಗತಿಯಾಗಿದೆ. ಶತಾಯುಷಿ ಭೀಮವ್ವ ಅವರು 'ದೇಶ- ವಿದೇಶಗಳಲ್ಲಿ ತೊಗಲುಗೊಂಬೆ ಪ್ರದರ್ಶಿಸಿರುವ ಮಹಾನ್ ಕಲಾವಿದೆ. ಭೀಮವ್ವ ಅವರು ಈಗಲೂ ಇನ್ನೂರು ವರ್ಷದ ಹಳೆಯ ತೊಗಲುಗೊಂಬೆಗಳನ್ನು ಸಂರಕ್ಷಿಸಿರುವುದು ವಿಶೇಷ. ಇವರಿಗೆ ಪ್ರಶಸ್ತಿ ದೊರಕಿರುವುದು ಸಂತಸ ತಂದಿದೆ. ರಾಜ್ಯ ಸರ್ಕಾರ ಈ ಹಿಂದೆಯೇ ಇವರ ಸಾಧನೆ ಗುರುತಿಸಿ ರಾಜ್ಯೋತ್ಸವ ಪ್ರಶಸ್ತಿ, ವಿವಿಧ ಅಕಾಡೆಮಿಗಳನ್ನು ನೀಡಿರುವುದು ನಮ್ಮ ಹೆಮ್ಮೆ. ಮಹನೀಯರ ಸಾಧನೆಗೆ ದೇಶದ ಅತ್ಯುನ್ನತ ಪ್ರಶಸ್ತಿ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗಿತ್ತು. ಇದೀಗ ಪದ್ಮಶ್ರೀ ಪ್ರಶಸ್ತಿ ಲಭಿಸಿರುವುದು ರಾಜ್ಯದ ಗರಿಮೆಯನ್ನು ಹೆಚ್ಚಿಸಿದೆ ಎಂದು ಸಚಿವರು ಬಣ್ಣಿಸಿದ್ದಾರೆ.
ಪ್ರಶಸ್ತಿ ಬಂದಿರುವುದು ಖುಷಿಯಾಗಿದೆ : ಈ ಬಗ್ಗೆ ಭೀಮವ್ವ ಶಿಳ್ಳೆಕ್ಯಾತರ ಅವರು ಮಾತನಾಡಿ, ''ನಾನು ರಾಮಾಯಣದಲ್ಲಿ ಬರುವ ರಾಮ, ಸೀತೆ, ಲಕ್ಷ್ಮಣ ಮೊದಲಾದವರ ಪಾತ್ರಗಳನ್ನು ತೊಗಲುಗೊಂಬೆಯಾಟದಲ್ಲಿ ಪ್ರದರ್ಶಿಸುತ್ತೇನೆ. ಸಂಪೂರ್ಣ ರಾಮಾಯಣ ಹಾಗೂ ಮಹಾಭಾರತವನ್ನು ಹಾಡುತ್ತೇವೆ. ಇದನ್ನು ಈಗ ಮಕ್ಕಳು, ಮೊಮ್ಮಕ್ಕಳು ಹಾಗೂ ಮರಿಮಕ್ಕಳು ಕಲಿಯುತ್ತಿದ್ದಾರೆ. ನನಗೆ ಪ್ರಶಸ್ತಿ ಬಂದಿರುವುದು ಖುಷಿಯಾಗಿದೆ'' ಎಂದರು.
ರಾಜ್ಯೋತ್ಸವ ಪ್ರಶಸ್ತಿ ಕೊಟ್ಟಿದ್ದಾರೆ : ಭೀಮವ್ವ ಮಗ ಕೇಶಪ್ಪ ಶಿಳ್ಳೆಕ್ಯಾತರ ಮಾತನಾಡಿ, ''ನಮ್ಮ ಅವ್ವಳಿಗೆ ಪದ್ಮಶ್ರೀ ಆಗಿರುವುದು ಬಹಳ ಖುಷಿಯಾಗುತ್ತಿದೆ. ಕೇಂದ್ರ ಸರ್ಕಾರಕ್ಕೆ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಪ್ರಶಸ್ತಿ ಸಿಕ್ಕಿರುವುದರಿಂದ ಕೊಪ್ಪಳ ಜಿಲ್ಲೆಯ ಜನತೆಗೆ ಒಂದು ಹಬ್ಬದ ಸಂಭ್ರಮವಾಗಿದೆ. ಗೊಂಬೆಯಾಟದಿಂದಲೇ ನಾವು ಜೀವನ ಸಾಗಿಸುತ್ತಾ ಬಂದಿದ್ದೇವೆ. ನಮಗೂ ಕೂಡ ರಾಜ್ಯೋತ್ಸವ ಪ್ರಶಸ್ತಿ ಕೊಟ್ಟಿದ್ದಾರೆ'' ಎಂದು ಹೇಳಿದರು.
ಇದನ್ನೂ ಓದಿ : ಪದ್ಮ ಪ್ರಶಸ್ತಿಗಳ ಪಟ್ಟಿ ಪ್ರಕಟ: ಕರ್ನಾಟಕದ 9 ಸಾಧಕರಿಗೆ ಗೌರವ, ಇಬ್ಬರು ಮಹಿಳೆಯರಿಗೂ ಒಲಿದ ಪ್ರಶಸ್ತಿಯ ಗರಿ - PADMA AWARDS LIST