ಬೆಂಗಳೂರು:ಚುನಾವಣೆ ಪ್ರಚಾರದ ಭರಾಟೆ ನಡುವೆ ಬೆಂಗಳೂರು ಪದವೀಧರರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಮೋಜಿ ಗೌಡ ಅವರು ಮತದಾರರಿಗೆ ಉಡುಗೊರೆ ನೀಡಿ ಆಮಿಷವೊಡ್ಡುವ ಮೂಲಕ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದಾರೆ ಎಂದು ಆರೋಪಿಸಿ ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು ಸಲ್ಲಿಸಿದೆ.
ಶೇಷಾದ್ರಿ ರಸ್ತೆಯಲ್ಲಿರುವ ಚುನಾವಣಾ ಆಯೋಗದ ಕಚೇರಿಗೆ ಶಾಸಕ ಸುರೇಶ್ ಕುಮಾರ್, ಸಿ.ಕೆ. ರಾಮಮೂರ್ತಿ ಮತ್ತು ಛಲವಾದಿ ನಾರಾಯಣಸ್ವಾಮಿ ಒಳಗೊಂಡ ಬಿಜೆಪಿ ನಿಯೋಗ ಭೇಟಿ ನೀಡಿತು. ಕೊರಿಯರ್ ಮೂಲಕ ಮತದಾರರಿಗೆ ಕಾಂಗ್ರೆಸ್ ಅಭ್ಯರ್ಥಿ ರಾಮೋಜಿ ಗೌಡ ಅವರು ಗಿಫ್ಟ್ ನೀಡಿ ಆಮಿಷ ಒಡ್ಡಿದ್ದಾರೆಂದು ಆರೋಪಿಸಿ ಮತದಾರರಿಗೆ ಕಳುಹಿಸಲ್ಪಟ್ಟಿರುವ ಗಿಫ್ಟ್ ಬಾಕ್ಸ್ನ್ನು ಚುನಾವಣಾ ಆಯೋಗಕ್ಕೆ ನೀಡಿ ದೂರು ಸಲ್ಲಿಕೆ ಮಾಡಿದರು.