ಶಿವಮೊಗ್ಗ:ಲೋಕಸಭಾ ಕ್ಷೇತ್ರದ ಚುನಾವಣೆ ಮೇ 7 ರಂದು ನಡೆಯಲಿದ್ದು, ರಾಜಕೀಯ ನಾಯಕರ ಚಿತ್ತ ಈಗ ಶಿವಮೊಗ್ಗದತ್ತ ಹರಿದಿದೆ. ಕರ್ನಾಟಕದಲ್ಲಿ ನಡೆದ ಮೊದಲ ಹಂತದ ಚುನಾವಣೆ ಮುಗಿದ ನಂತರ ಈಗ ನಾಯಕರು ಉಳಿದ ಕ್ಷೇತ್ರದ ಕಡೆ ತಮ್ಮ ಗಮನ ಹರಿಸುತ್ತಿದ್ದಾರೆ. ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರು ಈಗ ಶಿವಮೊಗ್ಗ ಕ್ಷೇತ್ರಕ್ಕೆ ದೌಡಾಯಿಸುತ್ತಿದ್ದಾರೆ. ಕಾಂಗ್ರೆಸ್ ಹಾಗೂ ಬಿಜೆಪಿ ವರಿಷ್ಠರು ತಮ್ಮ ತಮ್ಮ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲು ಆಗಮಿಸುತ್ತಿದ್ದಾರೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಆಗಮನ:ಬಿಜೆಪಿ ಅಭ್ಯರ್ಥಿ ಬಿ ವೈ ರಾಘವೇಂದ್ರ ಈಟಿವಿ ಭಾರತದೊಂದಿಗೆ ಮಾತನಾಡಿ, ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಅವರು ಶಿವಮೊಗ್ಗಕ್ಕೆ ಆಗಮಿಸಿ ನನ್ನ ಪ್ರಚಾರಕ್ಕೆ ಚಾಲನೆ ನೀಡಿದ್ದಾರೆ. ಈಗ ನಮ್ಮ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜಯಪ್ರಕಾಶ್ ನಡ್ಡಾ ಅವರು ಏಪ್ರಿಲ್ 30 ರಂದು ಶಿವಮೊಗ್ಗ ಜಿಲ್ಲೆಗೆ ಆಗಮಿಸಿ, ಅಂದು ಪ್ರಚಾರ ಸಭೆಯಲ್ಲಿ ಭಾಗವಹಿಸುವರು. ಅಲ್ಲದೇ ಜಿಲ್ಲಾ ಪ್ರವಾಸ ಕೈಗೊಳ್ಳಲಿರುವ ನಡ್ಡಾ ಅವರು ರೋಡ್ ಶೋದಲ್ಲಿ ಭಾಗಿಯಾಗುವರು. ಅಂದು ಬಿಜೆಪಿ ಪ್ರಮುಖರ ಜೊತೆ ಸಭೆಯನ್ನು ಸಹ ನಡೆಸಲಿದ್ದಾರೆ ಎಂದು ತಿಳಿಸಿದರು.
ಎಐಸಿಸಿ ನಾಯಕ ರಾಹುಲ್ ಗಾಂಧಿ:ಸಚಿವ ಮಧು ಬಂಗಾರಪ್ಪ ಈಟಿವಿ ಭಾರತದೊಂದಿಗೆ ಮಾತನಾಡಿ, ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಪರ ಪ್ರಚಾರ ನಡೆಸಲು ಎಐಸಿಸಿ ಮುಖ್ಯಸ್ಥ ರಾಹುಲ್ ಗಾಂಧಿ ಅವರು ಮೇ 2 ರಂದು ಶಿವಮೊಗ್ಗಕ್ಕೆ ಅಗಮಿಸುತ್ತಾರೆ. ಅಂದು ಬೆಳಗ್ಗೆ ವಿಶೇಷ ವಿಮಾನದ ಮೂಲಕ ಆಗಮಿಸುವ ರಾಹುಲ್ ಗಾಂಧಿ ಅವರು ಶಿವಮೊಗ್ಗ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ಸಮಾವೇಶವು ನಗರದ ಅಲ್ಲಮಪ್ರಭು ಮೈದಾನದಲ್ಲಿ ನಡೆಯಲಿದ್ದು, ಅಂದು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ ಕೆ ಶಿವಕುಮಾರ್ ಸೇರಿದಂತೆ ಇತರೆ ನಾಯಕರು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.