ಬೆಂಗಳೂರು:ವಿಧಾನಸಭೆಯಿಂದ ವಿಧಾನ ಪರಿಷತ್ಗೆ ನಡೆಯುವ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಹೆಸರನ್ನು ಹೈಕಮಾಂಡ್ ಅಂತಿಮಗೊಳಿಸಿದ್ದು, ನಾಳೆ ಅಧಿಕೃತವಾಗಿ ಪಟ್ಟಿ ಬಿಡುಗಡೆ ಮಾಡಲಾಗುತ್ತದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.
11 ಸ್ಥಾನಗಳಿಗೆ ನಡೆಯಲಿರುವ ಚುನಾವಣೆಗೆ ಸಂಖ್ಯಾ ಬಲದ ಆಧಾರದಲ್ಲಿ ಬಿಜೆಪಿಗೆ ಮೂರು ಸ್ಥಾನ ಸಿಗಲಿದೆ. ಮೂರು ಸ್ಥಾನಕ್ಕೆ 30ಕ್ಕೂ ಹೆಚ್ಚಿನ ಆಕಾಂಕ್ಷಿಗಳಿದ್ದು ಅಭ್ಯರ್ಥಿಗಳ ಆಯ್ಕೆ ವಿಳಂಬಕ್ಕೆ ಕಾರಣವಾಗಿದೆ. ರಾಜ್ಯ ಘಟಕ 30 ಹೆಸರುಗಳನ್ನು ಇರಿಸಿಕೊಂಡು ಪ್ರತಿ ಸ್ಥಾನಕ್ಕೆ ಐದು ಹೆಸರುಗಳಂತೆ 15 ಹೆಸರುಗಳನ್ನು ಹೈಕಮಾಂಡ್ಗೆ ಕಳುಹಿಸಿಕೊಟ್ಟಿತ್ತು. ನಂತರ ತಲಾ 3 ಹೆಸರು ಅಂತಿಮಗೊಳಿಸಿ, ಕಳುಹಿಸಿ ಎನ್ನುವ ಮತ್ತೊಂದು ನಿರ್ದೇಶನದ ಬಳಿಕ ಮತ್ತೊಮ್ಮೆ ಪಟ್ಟಿ ಪರಿಶೀಲನೆ ಮಾಡಿ ಪ್ರತಿ ಕ್ಷೇತ್ರಕ್ಕೆ 3 ಹೆಸರುಗಳಂತೆ 9 ಹೆಸರುಗಳ ಪಟ್ಟಿಯನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗೂ ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ರಾಜೇಶ್ ಜಿ.ವಿ. ಅಂತಿಮಗೊಳಿಸಿ ಕಳುಹಿಸಿಕೊಟ್ಟಿದ್ದರು.
ಪಟ್ಟಿಯನ್ನು ಪರಿಶೀಲನೆ ನಡೆಸಿರುವ ಬಿಜೆಪಿ ಹೈಕಮಾಂಡ್ ಕಳೆದ ರಾತ್ರಿ ಮೂವರು ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಿದೆ. ಇಂದು ಹೆಸರುಗಳಿಗೆ ಚುನಾವಣಾ ಸಮಿತಿಯ ಅನುಮೋದನೆ ಪಡೆದುಕೊಳ್ಳುವ ಪ್ರಕ್ರಿಯೆ ನಡೆಸಲಿದ್ದು ನಾಳೆ ಅಧಿಕೃತವಾಗಿ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಲಿದೆ.
ಹಾಲಿ ಸದಸ್ಯ ಎನ್.ರವಿಕುಮಾರ್, ಮಾಜಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಮಾಜಿ ಸಚಿವ ಮಾಧುಸ್ವಾಮಿ, ಮಹಿಳಾ ಘಟಕದ ಅಧ್ಯಕ್ಷೆ ಸಿ.ಮಂಜುಳಾ, ಗೀತಾ ವಿವೇಕಾನಂದ, ಮಾಳವಿಕಾ ಅವಿನಾಶ್ ಹೆಸರುಗಳು ಪ್ರಮುಖವಾಗಿ ಪಟ್ಟಿಯಲ್ಲಿದ್ದವು. ಇವುಗಳ ಹೊರತುಪಡಿಸಿಯೂ ಸಾಕಷ್ಟು ಹೆಸರಿದ್ದವು. ಇವುಗಳ ಕುರಿತು ಚರ್ಚಿಸಿ ಪಟ್ಟಿಯನ್ನು ಹೈಕಮಾಂಡ್ ಅಂತಿಮಗೊಳಿಸಿದೆ.