ಬೆಂಗಳೂರು:ಅಭಿವೃದ್ಧಿ ಮತ್ತು ಸಾರ್ವಜನಿಕ ಸೇವೆ ಮಾಡುವ ದೃಷ್ಟಿಕೋನ ಇಟ್ಟುಕೊಂಡು ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಲು ನಿರ್ಧರಿಸಿದೆ ಎಂದು ಮೈಸೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಸ್ಪಷ್ಟಪಡಿಸಿದ್ದಾರೆ.
ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನಕ್ಕೆ ಮೈಸೂರು ರಾಮವಂಶಸ್ಥ ಯದುವೀರ್ ಒಡೆಯರ್ ಭೇಟಿ ನೀಡಿದ ವೇಳೆ, ಅವರಿಗೆ ಖುದ್ದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಸ್ವಾಗತ ಕೋರಿದರು. ನಂತರ ಬಿಜೆಪಿ ಸಂಪ್ರದಾಯದಂತೆ ಭಾರತ ಮಾತೆ ಭಾವಚಿತ್ರ ಹಾಗೂ ಪಕ್ಷದ ಸಂಸ್ಥಾಪಕ ಜಗನ್ನಾಥರಾವ್ ಜೋಶಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿದರು. ನಂತರ ಪಕ್ಷದ ನಾಯಕರ ಜೊತೆ ಕೆಲಕಾಲ ಮಾತುಕತೆ ನಡೆಸಿದರು. ರಾಜಕೀಯ ಕ್ಷೇತ್ರಕ್ಕೆ ಈಗಷ್ಟೇ ಕಾಲಿಡುತ್ತಿರುವ ಯದುವೀರ್ ಅವರು ಚುನಾವಣೆ ಕುರಿತು ಸಾಕಷ್ಟು ಚರ್ಚೆ ನಡೆಸಿದರು.
ಜನರ ಋಣ ತೀರಿಸೋಕೆ ಇದು ಒಂದು ಅವಕಾಶ:ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಯದುವೀರ್ ಅವರು, ಮೈಸೂರು ರಾಜಮನೆತನಕ್ಕೆ ಸೇರಿ ಉತ್ತರಾಧಿಕಾರಿಯಾಗಿ ಜವಾಬ್ದಾರಿ ವಹಿಸಿಕೊಂಡ ನಂತರ ಒಂಬತ್ತು ವರ್ಷಗಳಿಂದ ನಾನು ಜನರ ಜೊತೆ ಇದ್ದೇನೆ. ಜನತೆ ನನ್ನನ್ನು ಸಹೋದರನ ತರಹ ನೋಡಿದ್ದಾರೆ. ಜನರ ಋಣ ತೀರಿಸೋಕೆ ಇದು ಒಂದು ಅವಕಾಶ. ಅಧಿಕಾರ ಇದ್ದಾಗ ಹೆಚ್ಚಿನ ಅಭಿವೃದ್ಧಿ ಮಾಡಲು ಅವಕಾಶ ಸಿಗುತ್ತದೆ ಹಾಗಾಗಿ ರಾಜಕೀಯಕ್ಕೆ ಬರುತ್ತಿದ್ದೇನೆ ಎಂದರು.