ಹಾವೇರಿ:ಸಿಎಂ ಸಿದ್ದರಾಮಯ್ಯ ಅನುಭವಿ ಆಡಳಿತಗಾರ ಎಂದು ಎಲ್ಲರೂ ಹೇಳುತ್ತಾರೆ. ಆದರೆ ಅವರ 10 ತಿಂಗಳ ಆಡಳಿತ ನೋಡಿದಾಗ ಅವರ ಅನುಭವವೇ ಬೇರೆ?, ಅವರ ಆಡಳಿತವೇ ಬೇರೆಯಾಗಿದೆ ಎನ್ನುವುದು ಗೊತ್ತಾಗುತ್ತದೆ ಎಂದು ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಟೀಕಿಸಿದರು.
ಹಾನಗಲ್ ತಾಲೂಕಿನ ಬೊಮ್ಮನಹಳ್ಳಿ ಗ್ರಾಮದಲ್ಲಿ ನಡೆದ ಬಿಜೆಪಿ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಯಾವುದೇ ಇಲಾಖೆಯಲ್ಲಿ ಒಂದು ಸಣ್ಣ ಕೆಲಸವೂ ಆಗಿಲ್ಲ. ಗ್ರಾಮೀಣ ಅಭಿವೃದ್ಧಿಯಲ್ಲಿ ಕೆಲಸ ಆಗಿಲ್ಲ. ಅವರ ಕೆಲಸ ಇರಲಿ. ನಾವು ಬಿಡುಗಡೆ ಮಾಡಿದ್ದ ಕೆಲಸಗಳನ್ನು ಪೂರ್ಣ ಮಾಡಲೂ ಸಹ ಈ ಸರ್ಕಾರಕ್ಕೆ ಆಗಿಲ್ಲ ಎಂದರು.
ಎಸ್ಸಿ-ಎಸ್ಟಿ ಅನುದಾನ ಗ್ಯಾರಂಟಿಗೆ ಬಳಕೆ:ಇವರು ಗ್ಯಾರಂಟಿ ಯೋಜನೆಗಳಿಗೆ ಹಣಕಾಸಿನ ವ್ಯವಸ್ಥೆ ಮಾಡಲೇ ಇಲ್ಲ. ಇದ್ದ ಹಣಕಾಸಿಗೆ ಕೈಹಾಕಿ ಗ್ಯಾರಂಟಿಗೆ ಕೊಡುತ್ತಿದ್ದಾರೆ. ಖಜಾನೆಯಲ್ಲಿ ಒಂದು ನಯಾ ಪೈಸಾ ಹಣ ಉಳಿದಿಲ್ಲ. ಎಸ್ಸಿ,ಎಸ್ಟಿ ಸಮುದಾಯಗಳಿಗೆ ಮೀಸಲಿಟ್ಟಿದ್ದ 11,300 ಕೋಟಿ ರೂಪಾಯಿ ಹಣವನ್ನು ಗ್ಯಾರಂಟಿಗಳಿಗೆ ಕೊಟ್ಟಿದಾರೆ ಎಂದು ದೂರಿದರು.
ನರೇಂದ್ರ ಮೋದಿ ಪ್ರಧಾನಿಗಳಾಗಿ ಹೊಸ ಸರ್ಕಾರ ಬಂದ ತಕ್ಷಣ ಈ ರಾಜ್ಯ ಸರ್ಕಾರ ಬೀಳುವ ದಿನಗಣನೆ ಶುರುವಾಗುತ್ತದೆ. 6 ತಿಂಗಳು ಅಥವಾ 1 ವರ್ಷದಲ್ಲಿ ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಮತ್ತೆ ಬಂದೇ ಬರುತ್ತೆ ಎಂದು ಭವಿಷ್ಯ ನುಡಿದರು. ಈ ಕಾಂಗ್ರೆಸ್ ಸರ್ಕಾರ ಬಂದಾಗ ಬರಗಾಲ ಗ್ಯಾರಂಟಿ, ಭ್ರಷ್ಟಾಚಾರ ಗ್ಯಾರಂಟಿ, ಅಭಿವೃದ್ಧಿ ಜಿರೋ ಗ್ಯಾರಂಟಿ ಫಿಕ್ಸ್. ಹೀಗಾಗಿ ಕಾಂಗ್ರೆಸ್ನವರು ಲೋಕಸಭಾ ಚುನಾವಣೆ ಸೋಲುವುದು ಕೂಡ ಗ್ಯಾರಂಟಿ ಎಂದು ಬೊಮ್ಮಾಯಿ ಹೇಳಿದರು.
ಇದನ್ನೂ ಓದಿ:ಬೆಂಗಳೂರು: ಬಿಜೆಪಿ ನಾಯಕನಿಗೆ ಹನಿಟ್ರ್ಯಾಪ್, ಆರೋಪಿಗಳ ವಿರುದ್ಧ ಪ್ರಕರಣ ದಾಖಲು - Honeytrap Case