ಬಳ್ಳಾರಿ: ಕೈಯಲ್ಲಿ ನಗದು, ನಾನಾ ಬ್ಯಾಂಕ್ ಖಾತೆಗಳಲ್ಲಿ ಲಕ್ಷಾಂತರ ರೂ. ಠೇವಣಿ, ಕಾರು, ಬಂಗಾರ, ಜಮೀನು ಎಲ್ಲವೂ ಇವೆ. ಆದರೂ, ಇವರು ಸಾಲಗಾರರು! ಸಂಡೂರು ಉಪಚುನಾವಣೆಯಲ್ಲಿ ನಾಮಪತ್ರ ಸಲ್ಲಿಕೆ ಮಾಡಿದ ಕಾಂಗ್ರೆಸ್‌ನ ಅನ್ನಪೂರ್ಣ ತುಕಾರಾಂ ಮತ್ತು ಬಿಜೆಪಿಯ ಬಂಗಾರು ಹನುಮಂತು ಅವರ ಅಫಿಡವಿಟ್‌ನಲ್ಲಿನ ಅಂಶಗಳಿವು.
’ಬಂಗಾರ'ದಲ್ಲಿ ಶ್ರೀಮಂತ ಹನುಮಂತು: ಇಬ್ಬರು ಕೋಟಿ ಒಡೆಯರು. ಚರಾಸ್ಥಿ, ಸ್ಥಿರಾಸ್ತಿಯಲ್ಲೂ ಮುಂದಿದ್ದಾರೆ. ಆದರೆ, ಬ್ಯಾಂಕ್‌ನಲ್ಲಿ ಸಾಲ ಇದೆ. ಕೈ ಅಭ್ಯರ್ಥಿ ಅನ್ನಪೂರ್ಣ ಅವರಿಗಿಂತಲೂ ಹನುಮಂತು 'ಬಂಗಾರ'ದಲ್ಲಿ ಶ್ರೀಮಂತ. ಬಂಗಾರು ಹನುಮಂತು ಬಳಿ 2.5 ಕೆ.ಜಿ ಚಿನ್ನಾಭರಣವಿದ್ದು, ಅವುಗಳ ಒಟ್ಟು ಮೌಲ್ಯ 2 ಕೋಟಿ. 25 ಕೆ.ಜಿ ಬೆಳ್ಳಿಯ ವಸ್ತುಗಳನ್ನೂ ಹೊಂದಿದ್ದು, ಅವುಗಳ ಒಟ್ಟು ಮೌಲ್ಯ 20 ಲಕ್ಷ. ಇನ್ನು ಹನುಮಂತು ಪತ್ನಿ ಬಂಗಾರು ರೂಪಶ್ರೀ ಬಳಿ 500 ಗ್ರಾಂ ಚಿನ್ನಾಭರಣವಿದ್ದು, 15 ಕೆ.ಜಿ ಬೆಳ್ಳಿಯ ವಸ್ತುಗಳನ್ನೂ ಹೊಂದಿದ್ದಾರೆ. ಆದರೆ, ಅನ್ನಪೂರ್ಣ ಬಳಿ 560 ಗ್ರಾಂ. ಚಿನ್ನವಿದ್ದು, ಅದರ ಮೌಲ್ಯ 13.57 ಲಕ್ಷ ರೂ., ಅವರ ಪತಿ ತುಕಾರಾಂ ಬಳಿ 350 ಗ್ರಾಂ ಚಿನ್ನವಿದ್ದು, ಅದರ ಮೌಲ್ಯ 12.62 ಲಕ್ಷ ರೂ.! ಇಬ್ಬರು ಆಸ್ತಿ ಹೋಲಿಸಿದರೂ ಬಂಗಾರು ಹನುಮಂತುನೇ ಚಿನ್ನದಲ್ಲಿ ಒಡೆಯ! ಇಬ್ಬರ ಅಭ್ಯರ್ಥಿಗಳ ಅವಲಂಬಿತರ ಬಳಿಯೂ ಚಿನ್ನಾಭರಣದ ವಸ್ತುಗಳಿರುವ ಉಲ್ಲೇಖಗಳಿವೆ.
ಬಂಗಾರು ಹನುಮಂತು ಕೈಯಲ್ಲಿ 5 ಲಕ್ಷ ಹಣವಿದೆ. ಐದು ವಿವಿಧ ಬ್ಯಾಂಕ್‌ಗಳಲ್ಲಿ ಉಳಿತಾಯ ಖಾತೆಗಳನ್ನು ಹೊಂದಿದ್ದಾರೆ. ಬಂಗಾರು ಗುಹಾನ್ ಅಗ್ರಿ ಆ್ಯಂಡ್ ಪೋಲ್ಟಿ ಹೆಸರಿನಲ್ಲಿಯೂ ಪ್ರತ್ಯೇಕವಾಗಿ ಖಾತೆ ಹೊಂದಿದ್ದು, ಮಂಗಳೂರಿನಲ್ಲಿ ರೆಸಾರ್ಟ್ ಮಾಲೀಕರಾಗಿದ್ದಾರೆ. ಸ್ಟೋನ್ ಕ್ರಷರ್, ಪೌಲ್ಟ್ರಿ ಫಾರಂಗಳೂ ಅವರ ಮಾಲೀಕತ್ವದಲ್ಲಿದೆ.
ಹನುಮಂತು ಅವರು ಫಾರ್ಚುನರ್ ಕಾರು, ಬುಲೆಟ್ ಬೈಕ್, ಟ್ರ‍್ಯಾಕ್ಟರ್ ಮತ್ತು ಟ್ರೈಲರ್, ಒಂದು ಜೆಸಿಬಿಯ ಒಡೆಯ. ಅವರ ವೈಯಕ್ತಿಕ ಚರಾಸ್ಥಿಗಳ ಒಟ್ಟು 7,58,64,019 ರೂ., ಅವರ ಪತ್ನಿ 1,69,82,571 ರೂ. ಆಗಿದೆ. ಇನ್ನು ಬಂಗಾರು ಹನುಮಂತು ಅವರಿಗೆ 28 ಕಡೆಗಳಲ್ಲಿ ಒಟ್ಟು 54.11 ಎಕರೆ ಕೃಷಿ ಭೂಮಿ ಇದೆ. ಇದೆಲ್ಲವೂ ಸ್ವಯಾರ್ಜಿತ ಎಂದು ತೋರಿಸಲಾಗಿದ್ದು, ಸ್ಥಿರಾಸ್ತಿ ಮೌಲ್ಯ 11 ಕೋಟಿ, ಪತ್ನಿಯು 2.56 ಕೋಟಿ ಸ್ಥಿರಾಸ್ತಿ ಹೊಂದಿರುವುದಾಗಿ ಅಫಿಡವಿಟ್‌ನಲ್ಲಿ ಉಲ್ಲೇಖಿಸಿದ್ದಾರೆ. ಬಂಗಾರು ಹನುಮಂತು ಅವರ ಒಟ್ಟು ಸಾಲ ಮತ್ತು ಹೊಣೆಗಾರಿಕೆ 2,54,83,569 ರೂ.ಗಳಾದರೆ, ಪತ್ನಿ ಹೆಸರಿನಲ್ಲಿ 1,35,04,660 ರೂ. ಸಾಲವಿದೆ.
ಹೀಗಿದೆ ಕೈ ಅಭ್ಯರ್ಥಿ ಆಸ್ತಿ-ಪಾಸ್ತಿ ವಿವರ:ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ತುಕಾರಾಂ ಕೂಡ ಕೈಯಲ್ಲಿ 2.57 ಲಕ್ಷ ರೂ. ಹಣವಿದ್ದು, ವಿವಿಧ ಐದು ಪ್ರತ್ಯೇಕ ಬ್ಯಾಂಕ್ ಖಾತೆ ಹೊಂದಿದ್ದಾರೆ. ಎಲ್ಲ ಮೂಲಗಳಿಂದ ಅನ್ನಪೂರ್ಣ ಅವರ ಚರಾಸ್ಥಿ ಮೌಲ್ಯ 44,37,315 ರೂ.ಗಳಾದರೆ, ಪತಿ ತುಕಾರಾಂ 1,48,55,674 ರೂ.ಗಳು. ಎಲ್ಲ ಮೂಲಗಳಿಂದ ಸ್ಥಿರಾಸ್ತಿ ಒಟ್ಟು ಮೌಲ್ಯ ಅನ್ನಪೂರ್ಣ ಹೆಸರಿನಲ್ಲಿ 63,21,380 ರೂ.ಗಳಾದರೆ, ಪತಿ ತುಕಾರಾಂ 47,66,960 ರೂ. ಸ್ಥಿರಾಸ್ತಿ ಹೊಂದಿದ್ದಾರೆ. ತಾವು 1,02,25,000 ರೂ. ಸಾಲ ಮತ್ತು ಹೊಣೆಗಾರಿಕೆ ಹೊಂದಿದ್ದರೆ, ಪತಿ 30 ಲಕ್ಷ ರೂ. ಸಾಲ ಹೊಂದಿರುವುದಾಗಿ ಅನ್ನಪೂರ್ಣ ಅವರು ಅಫಿಡಿವಿಟ್‌ನಲ್ಲಿ ಉಲ್ಲೇಖಿಸಿದ್ದಾರೆ.
ಅಪರಾಧ ಪ್ರಕರಣಗಳಿಲ್ಲ:ಇಬ್ಬರು ಅಭ್ಯರ್ಥಿಗಳ ಮೇಲೂ ಯಾವುದೇ ಅಪರಾಧ ಪ್ರಕರಣಗಳ ಉಲ್ಲೇಖವಿಲ್ಲ. ಇಬ್ಬರೂ ಅಭ್ಯರ್ಥಿಗಳು ಪದವೀಧರರಾಗಿದ್ದಾರೆ. ಅವರ ಬಳಿಗಿಂತ ಅವಲಂಬಿತರ ಬಳಿಯೂ ಹೆಚ್ಚು ಆಸ್ತಿ ಹೊಂದಿರುವುದು ಅಫಿಡಿವಿಟ್‌ನಲ್ಲಿ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ:ನಾಮಪತ್ರ ಸಲ್ಲಿಸುವ ಮುನ್ನ ದೇವಸ್ಥಾನಗಳಲ್ಲಿ ನಿಖಿಲ್ ವಿಶೇಷ ಪೂಜೆ: ತಾತ, ಅಪ್ಪ ಭಾಗಿ