ಬೆಂಗಳೂರು:ಗ್ರಾಮೀಣ ಪ್ರದೇಶದಲ್ಲಿ ಜನನ ಹಾಗೂ ಮರಣ ನೋಂದಣಿ ಪದ್ಧತಿಯನ್ನು ಬಲಪಡಿಸಲು ಹಾಗೂ 30 ದಿನಗಳ ಒಳಗೆ ಜನನ-ಮರಣ ಘಟನೆಗಳನ್ನು ನೋಂದಾಯಿಸುವ ಸಲುವಾಗಿ ಗ್ರಾಮ ಪಂಚಾಯತ್ ಕಾರ್ಯದರ್ಶಿಗಳನ್ನು ಜನನ, ಮರಣ ಉಪ ನೋಂದಣಾಧಿಕಾರಿಗಳನ್ನಾಗಿ ನೇಮಕ ಮಾಡಲಾಗಿದೆ. ಜುಲೈ 1ರಿಂದ ಜಾರಿಗೆ ಬರುವಂತೆ ಗ್ರಾಮ ಪಂಚಾಯತ್ಗಳಲ್ಲಿ ನೋಂದಣಿ ಪ್ರಕ್ರಿಯೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಪೂರ್ವಭಾವಿಯಾಗಿ ಎಲ್ಲಾ ಜಿಲ್ಲಾ ಪಂಚಾಯತ್ಗಳಲ್ಲಿ ಗ್ರಾಮ ಪಂಚಾಯತ್ ಕಾರ್ಯದರ್ಶಿಗಳು ಹಾಗೂ ಜನನ, ಮರಣ ಉಪ ನೋಂದಣಾಧಿಕಾರಿಗಳು ಮತ್ತು ಗ್ರಾಮ ಪಂಚಾಯತ್ ಡೇಟಾ ಎಂಟ್ರಿ ಆಪರೇಟರ್ಗಳಿಗೆ ಜನನ, ಮರಣ ನೋಂದಣಿಗೆ ಸಂಬಂಧಿಸಿದ ಅಧಿನಿಯಮ ಹಾಗೂ ನಿಯಮಗಳು ಮತ್ತು ಬಳಸಲಾಗುತ್ತಿರುವ ಇ-ಜನ್ಮ ತಂತ್ರಾಂಶದ ಬಗ್ಗೆ ತರಬೇತಿ ನೀಡಲಾಗಿದೆ ಎಂದು ಹೇಳಿದ್ದಾರೆ.
ಜನನ, ಮರಣ ಪ್ರಮಾಣ ಪತ್ರದ ಶುಲ್ಕ ಮಾಹಿತಿ ಹೀಗಿದೆ:ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿನ ಜನನ, ಮರಣ ಸಂಬಂಧ 21 ದಿನಗಳೊಳಗೆ ಜನನ, ಮರಣ ಘಟನೆಗಳನ್ನು ನೋಂದಣಿ ಮಾಡಿದ ಪ್ರಸಂಗಗಳಲ್ಲಿ ಉಚಿತವಾಗಿ ಪ್ರಮಾಣ ಪತ್ರವನ್ನು ವಿತರಿಸಲಾಗುವುದು. 21 ದಿನಗಳ ತರುವಾಯ ಮತ್ತು 30 ದಿನಗಳ ಒಳಗಿನ ಘಟನೆಗಳನ್ನು ನಿಯಮಗಳಂತೆ 2 ರೂ. ತಡೆ ಶುಲ್ಕ ಪಡೆದು ನೋಂದಾಯಿಸಲಾಗುವುದು. 30 ದಿನಗಳ ತರುವಾಯ ಒಂದು ವರ್ಷದೊಳಗೆ ವರದಿಯಾಗುವ ಜನನ, ಮರಣಗಳನ್ನು ತಹಶೀಲ್ದಾರರ ಲಿಖಿತ ಅನುಮತಿಯೊಂದಿಗೆ 5 ರೂ. ತಡೆ ಶುಲ್ಕ ಪಡೆದು ನೋಂದಾಯಿಸಲಾಗುವುದು. ಒಂದು ವರ್ಷ ನಂತರ ವರದಿಯಾಗುವ ಜನನ, ಮರಣ ಘಟನೆಗಳಿಗೆ ವಿಳಂಬ ನೋಂದಣಿ ಮಾಡಲು ಮೊದಲನೇ ವರ್ಗದ ದಂಡಾಧಿಕಾರಿ ಅಥವಾ ಮಹಾ ಪ್ರಾಂತ ದಂಡಾಧಿಕಾರಿ (Presidency Magistrate) ಅವರ ಆದೇಶದೊಂದಿಗೆ 10 ರೂ. ತಡೆ ಶುಲ್ಕ ಪಡೆದು ನೋಂದಣಿ ಮಾಡಲಾಗುವುದು ಎಂದು ಸಚಿವರು ಮಾಹಿತಿ ನೀಡಿದ್ದಾರೆ.