ಬೆಂಗಳೂರು: ಅಪಘಾತದ ರಭಸಕ್ಕೆ ರಾಜಕಾಲುವೆಗೆ ಹಾರಿ ಬಿದ್ದು ಕೊಚ್ಚಿಕೊಂಡು ಹೋಗಿರುವ ದ್ವಿಚಕ್ರ ವಾಹನ ಸವಾರನಿಗಾಗಿ ಅಗ್ನಿಶಾಮಕ ದಳದ ಸಿಬ್ಬಂದಿಯ ಕಾರ್ಯಾಚರಣೆ ಮುಂದುವರೆದಿದೆ. ಶುಕ್ರವಾರ ರಾತ್ರಿ 10:30ರ ಸುಮಾರಿಗೆ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ಹೇಮಂತ್ ಕುಮಾರ್ ಎಂಬಾತ ಅಪಘಾತದ ರಭಸಕ್ಕೆ ಆಯತಪ್ಪಿ ರಸ್ತೆ ಪಕ್ಕದಲ್ಲಿರುವ ರಾಜಕಾಲುವೆಗೆ ಬಿದ್ದಿದ್ದಾನೆ.
ಬ್ಯಾಟರಾಯನಪುರದ ನಿವಾಸಿಯಾಗಿದ್ದ ಹೇಮಂತ್ ಕುಮಾರ್ ಡಿಲೆವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ. ನಿನ್ನೆ ರಾತ್ರಿ ಸುಮಾರಿಗೆ ಕೆಲಸ ಮುಗಿಸಿ ವಾಪಾಸಾಗುತ್ತಿದ್ದಾಗ ಮೈಸೂರು ರಸ್ತೆಯ ಜ್ಞಾನ ಭಾರತಿ ಮೆಟ್ರೋ ನಿಲ್ದಾಣದ ಬಳಿ ಹೇಮಂತ್ ದ್ವಿಚಕ್ರ ವಾಹನ ರಸ್ತೆ ಪಕ್ಕದ ವಿಭಜಕಕ್ಕೆ ಡಿಕ್ಕಿಹೊಡೆದಿತ್ತು. ಅಪಘಾತದ ರಭಸದಿಂದಾಗಿ ಹೇಮಂತ್ ಕುಮಾರ್ ಆಯತಪ್ಪಿ ರಸ್ತೆ ಪಕ್ಕದಲ್ಲಿದ್ದ ರಾಜಕಾಲುವೆಯೊಳಗೆ ಬಿದ್ದಿದ್ದಾನೆ.