ಕೆಎಸ್ಆರ್ಟಿಸಿ ಬಸ್ ಹರಿದು ದ್ವಿಚಕ್ರ ವಾಹನ ಸವಾರ ಸಾವು ಬೆಂಗಳೂರು: ಕೆಎಸ್ಆರ್ಟಿಸಿ ಬಸ್ ಚಕ್ರ ಹರಿದು ದ್ವಿಚಕ್ರ ವಾಹನ ಸವಾರರೊಬ್ಬರು ಸಾವನ್ನಪ್ಪಿರುವ ಘಟನೆ ಇಂದು ಬೆಳಿಗ್ಗೆ ಯಶವಂತಪುರ ಮೆಟ್ರೋ ನಿಲ್ದಾಣದ ಬಳಿ ನಡೆದಿದೆ. ನಾಗಸಂದ್ರ ನಿವಾಸಿಯಾಗಿದ್ದ ರಾಜೇಂದ್ರ (50) ಮೃತರು.
ನೆಲಮಂಗಲದ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ರಾಜೇಂದ್ರ, ಕೆಲಸದ ನಿಮಿತ್ತ ಬೆಳಿಗ್ಗೆ ತಮ್ಮ ದ್ವಿಚಕ್ರ ವಾಹನದಲ್ಲಿ ಜಿಎಸ್‌ಟಿ ಕಚೇರಿಗೆ ತೆರಳುತ್ತಿದ್ದರು. ಇದೇ ಸಂದರ್ಭದಲ್ಲಿ ಅವರ ಬಲಬದಿ ಬಂದ ಕೆಎಸ್ಆರ್ಟಿಸಿ ಬಸ್ ಡಿಕ್ಕಿಯಾದ ಪರಿಣಾಮ ಕೆಳಕ್ಕೆ ಬಿದ್ದಿದ್ದರು. ಈ ವೇಳೆ ರಾಜೇಂದ್ರ ಅವರ ತಲೆ ಮೇಲೆ ಬಸ್‌ನ ಹಿಂಬದಿ ಚಕ್ರ ಹರಿದಿದೆ. ಪರಿಣಾಮ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನಾ ಸ್ಥಳಕ್ಕೆ ಭೇಟಿ ನೀಡಿದ ಯಶವಂತಪುರ ಸಂಚಾರಿ ಠಾಣಾ ಪೊಲೀಸರು ಬಸ್ ಚಾಲಕನನ್ನ ವಶಕ್ಕೆ ಪಡೆದಿದ್ದು, ಬಸ್‌ಅನ್ನು ತಮ್ಮ ಸುಪರ್ದಿಗೆ ಪಡೆದುಕೊಂಡಿದ್ದಾರೆ. ದ್ವಿಚಕ್ರ ವಾಹನ ಸವಾರರು ಭಾರಿ ವಾಹನಗಳ ಪಕ್ಕದಲ್ಲಿ ಸಾಗುವಾಗ ಹೆಚ್ಚು ಎಚ್ಚರಿಕೆ ವಹಿಸುವಂತೆ ಬೆಂಗಳೂರು ಸಂಚಾರ ಉತ್ತರ ವಿಭಾಗದ ಡಿಸಿಪಿ ಸಿರಿಗೌರಿ ಡಿ.ಆರ್ ತಿಳಿಸಿದ್ದಾರೆ.
ಇದನ್ನೂ ಓದಿ:ಬಸ್ ಹರಿದು ಕಾಂಗ್ರೆಸ್ ಕಾರ್ಯಕರ್ತ ಸಾವು: ಹುಬ್ಬಳ್ಳಿ ಸಮಾವೇಶಕ್ಕೆ ಬಂದಾಗ ಘಟನೆ
ಬಿಎಂಟಿಸಿ ಬಸ್ ಹರಿದು ಬೈಕ್ ಸವಾರ ಸಾವು: ಕೆಲ ತಿಂಗಳ ಹಿಂದೆ ಓವರ್ ಟೇಕ್ ಮಾಡುವ ಭರದಲ್ಲಿ ಬಿಎಂಟಿಸಿ ಬಸ್ಗೆ ಡಿಕ್ಕಿ ಹೊಡೆದು ಕೆಳಗೆ ಬಿದ್ದ ಸವಾರನ ಮೇಲೆ ಬಸ್ ಹರಿದಿತ್ತು. ಪರಿಣಾಮ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದ ಘಟನೆ ಬೆಂಗಳೂರಿನ ಯಲಹಂಕ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿತ್ತು. ಅಟ್ಟೂರಿನ ಮದರ್ ಡೈರಿ ಬಳಿ ದುರಂತ ಸಂಭವಿಸಿದ್ದು, ಅವಘಡದಲ್ಲಿ ಸ್ಕೂಟರ್ ಸವಾರ ಭರತ್ ರೆಡ್ಡಿ ಸಾವನ್ನಪ್ಪಿದ್ದರು. ಎಂಜಿನಿಯರಿಂಗ್ ಮುಗಿಸಿದ್ದ ಭರತ್, ಸಿವಿಲ್ ಕಂಟ್ರಾಕ್ಟರ್ ಆಗಿ ಕೆಲಸ ಮಾಡುತ್ತಿದ್ದರು.
ಅಟ್ಟೂರು ಕಡೆಯಿಂದ ಸ್ಕೂಟರ್ ಚಲಾಯಿಸಿಕೊಂಡು ಬರುತ್ತಿದ್ದರು. ಕಿರಿದಾದ ರಸ್ತೆಯಲ್ಲಿ ಚಾಲನೆ ಮಾಡುತ್ತಿರುವಾಗ ಮುಂದೆ ಹೋಗುತ್ತಿದ್ದ ಬಿಎಂಟಿಸಿ ಬಸ್ ಓವರ್ ಟೇಕ್ ಮಾಡಲು ಮುಂದಾಗಿದ್ದರು. ಈ ವೇಳೆ, ಬಸ್ಗೆ ಡಿಕ್ಕಿ ಹೊಡೆದು ನಿಯಂತ್ರಣ ತಪ್ಪಿ ಕೆಳಗೆ ಬಿದ್ದಿದ್ದಾರೆ. ಆಗ ಸವಾರನ ಮೇಲೆ ಬಸ್ ಹರಿದ ಪರಿಣಾಮ ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲೇ ಮೃತಪಟ್ಟಿದ್ದರು.