ರಾಮನಗರ:ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಹಾಲಿ ಸಂಸದ ಡಿ.ಕೆ ಸುರೇಶ್ ಗುರುವಾರ ನಾಮಪತ್ರ ಸಲ್ಲಿಸಿದ್ದಾರೆ. ರಾಮನಗರದಲ್ಲಿ ಕ್ಷೇತ್ರದ ಬೆಂಬಲಿಗರೊಂದಿಗೆ ಅದ್ಧೂರಿ ಮೆರವಣಿಗೆಯಲ್ಲಿ ತೆರಳಿ ಉಮೇದುವಾರಿಕೆ ಸಲ್ಲಿಕೆ ಮಾಡಿರುವ ಸುರೇಶ್ ಅವರು ತಮ್ಮ ಆಸ್ತಿ ವಿವರ ನೀಡಿದ್ದು, ಸಹೋದರ ಡಿ.ಕೆ.ಶಿವಕುಮಾರ್ಗೂ ಸಾಲ ನೀಡಿದ್ದಾರೆ.
ಡಿ.ಕೆ ಸುರೇಶ್ ಅವರು 593 ಕೋಟಿ ಆಸ್ತಿ ಘೋಷಣೆ ಮಾಡಿದ್ದಾರೆ. ದ್ವಿತೀಯ ಪಿಯುಸಿ ವಿದ್ಯಾರ್ಹತೆ ಹೊಂದಿರುವುದಾಗಿ ನಮೂದಿಸಿದ್ದಾರೆ. ಅಫಿಡವಿಟ್ ಪ್ರಕಾರ 2019 ರಿಂದ ಕಳೆದ 5 ವರ್ಷಗಳಲ್ಲಿ ಡಿ.ಕೆ. ಸುರೇಶ್ ಅವರ ಆಸ್ತಿಯಲ್ಲಿ ಸುಮಾರು 259.19 ಕೋಟಿ ರೂಪಾಯಿ ಏರಿಕೆ ಆಗಿದೆ.
ಸುರೇಶ್ ಸಲ್ಲಿಕೆ ಮಾಡಿರುವ ಅಫಿಡವಿಟ್ ಮಾಹಿತಿ:
ಚರಾಸ್ತಿ: 106.71 ಕೋಟಿ ರೂ.
ಸ್ಥಿರಾಸ್ತಿ: 486.33 ಕೋಟಿ ರೂ.
ಒಡವೆ:1260 ಗ್ರಾಂ ಚಿನ್ನಾಭರಣ, 4.86 ಕೆಜಿ ಬೆಳ್ಳಿ
ಸಾಲ: 150.06 ಕೋಟಿ ರೂ.
ಸ್ವಂತ ಕಾರು: ಇಲ್ಲ
ಒಟ್ಟು ಆಸ್ತಿ: 593.05 ಕೋಟಿ ರೂ.
2019 ರಲ್ಲಿದ್ದ ಒಟ್ಟು ಆಸ್ತಿ:333.86 ಕೋಟಿ ರೂ.
ವಾರ್ಷಿಕ ಆಸ್ತಿ ಹೆಚ್ಚಳ:
2019- 1,12,17,630 ರೂ.
2020- 3,71,38,390 ರೂ.
2021 - 32,51,35,700 ರೂ.
2022 -2,29,82,360 ರೂ.
2023 - 12,30,04,200 ರೂ.
ಡಿ.ಕೆ.ಸುರೇಶ್ ವಿವಿಧ ಬ್ಯಾಂಕ್ ಮತ್ತು ವಿಮಾ ಪಾಲಿಸಿ ಸೇರಿ 1.66 ಕೋಟಿ ರೂ. ಠೇವಣಿ ಇರಿಸಿದ್ದು, ವಿವಿಧ ಸಂಸ್ಥೆಗಳಲ್ಲಿ 2.14 ಕೋಟಿ ರೂ. ಷೇರು ಬಂಡವಾಳ ಹೂಡಿಕೆ ಮಾಡಿದ್ದಾರೆ. ಬೆಂಗಳೂರಿನ ಪ್ರತಿಷ್ಟಿತ ಲೂಲು ಮಾಲ್, ಗ್ಲೋಬಲ್ ಮಾಲ್‌ನಲ್ಲಿ ಇವರು ಪಾಲುದಾರಿಕೆ ಹೊಂದಿದ್ದಾರೆ. ಇವರ ಒಟ್ಟಾರೆ ವಾಣಿಜ್ಯ ಬಳಕೆ ಆಸ್ತಿಗಳ ಮೌಲ್ಯ 35.41 ಕೋಟಿ ರೂ. ಆಗಿದೆ. 210 ಕೋಟಿ ರೂ. ಮೌಲ್ಯದ ಕೃಷಿ ಭೂಮಿ, ನಿವೇಶನಗಳನ್ನು ಹೊಂದಿದ್ದಾರೆ.
ಕನಕಪುರ ತಾಲೂಕಿನ ರಾಂಪುರ ದೊಡ್ಡಿ ಗ್ರಾಮ, ಬೆಂಗಳೂರಿನ ಸದಾಶಿವನಗರ ಹಾಗೂ ಕೆಂಗೇರಿ ಪಂತರಪಾಳ್ಯದಲ್ಲಿ ವಾಸ ಯೋಗ್ಯ ಕಟ್ಟಡಗಳಿವೆ. ಇವುಗಳ ಒಟ್ಟು ಮೌಲ್ಯ 27.13 ಕೋಟಿ ರೂ. ಆಗಿದೆ. 4.77 ಲಕ್ಷ ರೂ. ನಗದು ಹೊಂದಿರುವ ಸುರೇಶ್, ಸಹೋದರ ಡಿ.ಕೆ.ಶಿವಕುಮಾರ್‌ಗೆ 30.08 ಕೋಟಿ ರೂ. ಸೇರಿದಂತೆ 86.79 ಕೋಟಿ ರೂ. ಸಾಲವನ್ನು ವಿವಿಧ ವ್ಯಕ್ತಿಗಳು ಹಾಗೂ ಸಂಸ್ಥೆಗಳಿಗೆ ನೀಡಿದ್ದಾರೆ.
1.260 ಕೆಜಿ ಚಿನ್ನ, 4.860 ಕೆಜಿ ಬೆಳ್ಳಿ ಹೊಂದಿರುವ ಇವರ ಬಳಿ, 73 ಲಕ್ಷ ರೂ. ಮೌಲ್ಯದ ಗೃಹೋಪಯೋಗಿ ಆಭರಣಗಳಿವೆ. ಡಿ.ಕೆ.ಸುರೇಶ್ ವಿರುದ್ಧ ಕೋವಿಡ್ ನಿಯಮ ಉಲ್ಲಂಘನೆಗೆ ಸಂಬಂಸಿದಂತೆ ಎರಡು, ನೀತಿ ಸಂಹಿತೆ ಉಲ್ಲಂಘನೆ ಮಾಡಿರುವುದಕ್ಕೆ ಸಂಬಂಧಿಸಿದಂತೆ ಒಂದು ಪ್ರಕರಣ ದಾಖಲಾಗಿದೆ.
ಆದಾಯ ತೆರಿಗೆ, ಬಿಬಿಎಂಪಿಗೆ ಆಸ್ತಿ ತೆರಿಗೆ ಸೇರಿದಂತೆ 64.44 ಕೋಟಿ ರೂ. ಹಾಗೂ ಇತರ 7.16 ಕೋಟಿ ರೂ. ತೆರಿಗೆ ಪಾವತಿ ಮಾಡಿದ್ದಾರೆ. 57.27 ಕೋಟಿ ರೂ. ತೆರಿಗೆ ಪಾವತಿ ಬಾಕಿ ಉಳಿದಿದೆ. ತೆರಿಗೆ ಪಾವತಿಗೆ ಸಂಬಂಧಿಸಿದಂತೆ ಆದಾಯ ತೆರಿಗೆ ಇಲಾಖೆಯಲ್ಲಿ ಪ್ರಕರಣವಿದೆ. ಅಫಿಡವಿಟ್‌ನಲ್ಲಿ ತಾವೊಬ್ಬ ಕೃಷಿಕ, ಉದ್ಯಮಿ ಹಾಗೂ ಸಾಮಾಜಿಕ ಕಾರ್ಯಕರ್ತ ಎಂದು ಅವರು ಹೇಳಿಕೊಂಡಿದ್ದಾರೆ. 2013ರಲ್ಲಿ ಇವರ ಆಸ್ತಿ ಮೌಲ್ಯ 47.29 ಕೋಟಿ ರೂ. ಇತ್ತು. 2014ರಲ್ಲಿ 85.82 ಕೋಟಿ ರೂ.ಗೆ ಏರಿತ್ತು. ಇದೀಗ 593 ಕೋಟಿ ರೂ.ಗಳಿಗೆ ಹೆಚ್ಚಳವಾಗಿದೆ.
ಕ್ರಿಮಿನಲ್ ಪ್ರಕರಣ:2013ರ ಉಪಚುನಾವಣೆ ಹಾಗೂ 2014ರ ಸಾರ್ವತ್ರಿಕ ಲೋಕಸಭಾ ಚುನಾವಣೆಗೆ ಸ್ಪರ್ದೆ ಮಾಡಿದ್ದಾಗ ಇವರ ವಿರುದ್ಧ 8 ಕ್ರಿಮಿನಲ್ ಪ್ರಕರಣಗಳು ದಾಖಲಾಗಿದ್ದವು. 2019ರಲ್ಲಿ ಈ ಸಂಖ್ಯೆ 5ಕ್ಕೆ ಇಳಿದರೆ, ಇದೀಗ ಅವರ ವಿರುದ್ಧ ಕೇವಲ 3 ಕ್ರಿಮಿನಲ್ ಪ್ರಕರಣಗಳಿವೆ.
ಸಾಲ ಹೆಚ್ಚಳ:2013ರಲ್ಲಿ 17.70 ಕೋಟಿ ರೂ. ಇದ್ದ ಇವರ ಸಾಲ, 2014 ರಲ್ಲಿ 18.48 ಕೋಟಿ ರೂ. ಆಗಿತ್ತು. 2019ರಲ್ಲಿ 51.93 ಕೋಟಿ ರೂ. ಇದ್ದ ಸಾಲ, ಇದೀಗ 150 ಕೋಟಿ ರೂ.ಗಳಿಗೆ ತಲುಪಿದೆ.
ಡಿಕೆಶಿಗೂ ಸಾಲ:ಡಿಕೆ ಸುರೇಶ್ ಕೈಯಲ್ಲಿ 4.77 ಲಕ್ಷ ರೂ. ಹಣವಿದ್ದರೆ, ಒಟ್ಟು 106.71 ಕೋಟಿ ರೂ. ಚರಾಸ್ತಿ ಇದೆ. ಇದರಲ್ಲಿ ಬ್ಯಾಂಕ್ ಖಾತೆಯಲ್ಲಿ 16.61 ಕೋಟಿ ರೂ., ವಿವಿಧ ಹೂಡಿಕೆಗಳಲ್ಲಿ 2.14 ಕೋಟಿ ರೂ. ಇದೆ. ಕ್ವಾರಿ ಲೀಸ್‌ಗೆ ಕೊಟ್ಟಿರುವ ಹಣ ಸೇರಿ ಒಟ್ಟು 86.79 ಕೋಟಿ ರೂ. ಸಾಲ ನೀಡಿರುವುದಾಗಿ ಅವರು ತಿಳಿಸಿದ್ದಾರೆ. ಇದರಲ್ಲಿ ಅಣ್ಣ ಡಿ.ಕೆ. ಶಿವಕುಮಾರ್‌ಗೆ 30.08 ಕೋಟಿ ರೂ. ಸಾಲ ನೀಡಿದ್ದರೆ, ಡಿಕೆಶಿ ಪುತ್ರಿ ಐಶ್ವರ್ಯಾಗೆ 7.94 ಕೋಟಿ ರೂ., ಡಿಕೆಶಿ ಪುತ್ರ ಆಕಾಶ್‌ಗೆ 1.06 ಕೋಟಿ ರೂ., ತಾಯಿ ಗೌರಮ್ಮಗೆ 4.75 ಕೋಟಿ ರೂ., ಕುಣಿಗಲ್ ಶಾಸಕ ರಂಗನಾಥ್ ಪತ್ನಿ ಡಾ. ಸುಮಾ ರಂಘನಾಥ್ ಅವರಿಗೆ 30 ಲಕ್ಷ ರೂ. ಸಾಲ ನೀಡಿದ್ದಾರೆ.
ಒಟ್ಟು 486.33 ಕೋಟಿ ರೂ. ಮೊತ್ತದ ಸ್ಥಿರಾಸ್ತಿ ಇದೆ. ಇದರಲ್ಲಿ 209.96 ಕೋಟಿ ರೂ. ಮೊತ್ತದ ಆಸ್ತಿ ಪಿತ್ರಾರ್ಜಿತವಾಗಿ ಬಂದಿದ್ದು, 276.37 ಕೋಟಿ ರೂ. ಮೊತ್ತದ ಆಸ್ತಿ ತಾವೇ ಖರೀದಿಸಿರುವುದು ಎಂದು ಡಿ.ಕೆ ಸುರೇಶ್ ತಿಳಿಸಿದ್ದಾರೆ. ತಾವು ಖರೀದಿಸಿದ ಆಸ್ತಿಯ ಖರೀದಿ ಬೆಲೆ 56.06 ಕೋಟಿ ರೂ. ಆಗಿದ್ದು, ಇದರ ಸದ್ಯದ ಮಾರುಕಟ್ಟೆ ಮೌಲ್ಯ 276.37 ಕೋಟಿ ರೂ. ಎಂದು ಮಾಹಿತಿ ನೀಡಿದ್ದಾರೆ.
ಜಮೀನು ವಿವರ:21 ಕೃಷಿ ಭೂಮಿ, 27 ಕೃಷಿಯೇತರ ಜಮೀನು ಹೊಂದಿರುವುದಾಗಿ ತಿಳಿಸಿದ್ದಾರೆ. ಕೃಷಿ ಭೂಮಿಯ ಈಗಿನ ಮೌಲ್ಯ 32.75 ಕೋಟಿ ರೂ. ಆಗಿದ್ದರೆ, ಕೃಷಿಯೇತರ ಭೂಮಿ ಮೌಲ್ಯ 210.47 ಕೋಟಿ ರೂ. ಆಗಿದೆ. 9 ವಾಣಿಜ್ಯ ಸಂಕೀರ್ಣಗಳೂ ಇವರಿಗಿದ್ದು, ಇವುಗಳ ಮೌಲ್ಯ 211.91 ಕೋಟಿ ರೂ. ಆಗಿದೆ. ಮೈಸೂರು ರಸ್ತೆಯಲ್ಲಿರುವ ಗ್ಲೋಬಲ್ ಮಾಲ್ ಕೂಡ ಇದರಲ್ಲಿ ಸೇರಿದೆ.
ಬ್ಯಾಂಕ್ನಿಂದ ಅವರು 20.04 ಕೋಟಿ ರೂ. ಸಾಲ ಪಡೆದಿದ್ದಾರೆ. ಶೋಭಾ ಡೆವಲಪರ್ಸ್‌ಗೆ 99.19 ಕೋಟಿ ರೂ., ಸಿಎಂಆರ್ ಟ್ರಸ್ಟ್‌ಗೆ 15 ಕೋಟಿ ರೂ., ಲುಲೂ ಮಾಲ್‌ಗೆ 3 ಕೋಟಿ ರೂ.ಗಳನ್ನು ಅವರು ನೀಡಬೇಕಿದೆ. ಸದ್ಯ ಡಿ.ಕೆ.ಸುರೇಶ್ ಬಳಿ ಯಾವುದೇ ವಾಹನಗಳಿಲ್ಲ ಎಂದು ಆಫಿಡವಿಟ್ನಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ:ದೇವಾಲಯದಲ್ಲಿ ಪೂಜೆ, ಅಣ್ಣ-ಅತ್ತಿಗೆ ಆಶೀರ್ವಾದ ಪಡೆದು ನಾಮಪತ್ರ ಸಲ್ಲಿಸಿದ ಡಿಕೆ ಸುರೇಶ್ - dk suresh submit nomination