ಬೆಂಗಳೂರು:ಬಾಂಬ್ಸ್ಫೋಟ ಸಂಭವಿಸಿದ ಬಳಿಕ ಮೊದಲ ಬಾರಿಗೆ ಗ್ರಾಹಕರಿಗೆ ತೆರೆದುಕೊಳ್ಳಲು ನಗರದ ಐಟಿಪಿಎಲ್ ಮುಖ್ಯರಸ್ತೆಯಲ್ಲಿರುವ 'ದಿ ರಾಮೇಶ್ವರಂ ಕೆಫೆ' ಸಜ್ಜಾಗಿದೆ. ಒಂದು ವಾರದ ಬಳಿಕ ಕೆಫೆಯಲ್ಲಿ ದೈನಂದಿನ ವಹಿವಾಟು ಆರಂಭಿಸಲು ಸಕಲ ಸಿದ್ಧತೆ ನಡೆದಿದೆ. ಈ ನಿಟ್ಟಿನಲ್ಲಿ ಇಂದು (ಶುಕ್ರವಾರ) ಪೂಜೆ, ಹೋಮ ಹವನಾದಿಗಳು ನಿಗದಿಯಾಗಿವೆ.
ಕೆಫೆಯಲ್ಲಿ ಹಾನಿಗೊಳಗಾಗಿದ್ದ ಸ್ಥಳವನ್ನು ಸಂಪೂರ್ಣವಾಗಿ ಮರುನಿರ್ಮಾಣ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದ ನೀಡದಂತೆ ಗ್ರಾಹಕರು ಪ್ರವೇಶಿಸುವ ಕಡೆಗಳಲ್ಲೆಲ್ಲಾ ಮೆಟಲ್ ಡಿಟೆಕ್ಟರ್ ಅಳವಡಿಸಲಾಗಿದೆ. ಪ್ರತಿಯೊಬ್ಬ ಗ್ರಾಹಕರನ್ನೂ ಮೆಟಲ್ ಡಿಟೆಕ್ಟರ್ ಹಾಗೂ ಹ್ಯಾಂಡ್ ಡಿಟೆಕ್ಟರ್ ಮೂಲಕ ಪರಿಶೀಲಿಸಿದ ಬಳಿಕವೇ ಪ್ರವೇಶಕ್ಕೆ ಅನುವು ಮಾಡಿಕೊಡಲು ನಿರ್ಧರಿಸಲಾಗಿದೆ.
ಸದ್ಯ ಕೆಫೆ ಸುತ್ತಲಿನ ರಸ್ತೆಗಳಲ್ಲಿ ಅಳವಡಿಸಿರುವ ಬ್ಯಾರಿಕೇಡ್ಗಳನ್ನು ಪೊಲೀಸರು ತೆರವುಗೊಳಿಸದ ಕಾರಣ ಪೊಲೀಸ್ ಭದ್ರತೆಯಲ್ಲಿಯೇ ಇಂದು ಮುಂಜಾನೆಯಿಂದ ಪೂಜಾ ಕೈಂಕರ್ಯಗಳು ಆರಂಭವಾಗಿವೆ. ಕೆಫೆಯನ್ನು ಸಂಪೂರ್ಣವಾಗಿ ತಳಿರು-ತೋರಣಗಳಿಂದ ಅಲಂಕರಿಸಿ ಸಿಂಗರಿಸಲಾಗಿದೆ. ನಾಳೆ ಮುಂಜಾನೆ 6.30ರಿಂದ ಎಂದಿನಂತೆ ಕೆಫೆ ಸಾರ್ವಜನಿಕರಿಗೆ ಮುಕ್ತವಾಗಲಿದೆ ಎಂದು ಕೆಫೆಯ ಅಧಿಕೃತ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಮಾಹಿತಿ ಹಂಚಿಕೊಳ್ಳಲಾಗಿದೆ.