ಬೆಂಗಳೂರು :ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಪ್ರೊ. ರಾಜೀವ್ಗೌಡ ಅವರು ಬೆಂಗಳೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಇಂದು ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಸಚಿವರಾದ ಕೃಷ್ಣಬೈರೇಗೌಡ, ಬೈರತಿ ಸುರೇಶ್, ಶಾಸಕ ಎ ಸಿ ಶ್ರೀನಿವಾಸ್ ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಅಬ್ದುಲ್ ವಾಜಿದ್ ಅವರು ಉಪಸ್ಥಿತರಿದ್ದರು.
ನಂತರ ಸುದ್ದಿಗಾರರ ಜೊತೆ ಮಾತನಾಡಿದ ಪ್ರೊ. ರಾಜೀವ್ಗೌಡ ಅವರು, ನಮ್ಮ ನಡಿಗೆ ಅಭಿವೃದ್ಧಿಯ ಕಡೆಗೆ, ಬೆಂಗಳೂರು ಉತ್ತರದಲ್ಲಿ ಈ ಬಾರಿ ಕಾಂಗ್ರೆಸ್ ಬರಲಿದೆ. ಗೆಲುವು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಜನರ ಕಷ್ಟದ ಸಮಯದಲ್ಲಿ ಗ್ಯಾರಂಟಿಗಳನ್ನು ರಾಜ್ಯ ಸರ್ಕಾರ ಕೊಟ್ಟಿದೆ. ನಮಗೆ ನೂರಕ್ಕೆ ನೂರರಷ್ಟು ಗೆಲ್ಲುವ ವಿಶ್ವಾಸವಿದೆ ಎಂದರು. ಬಿಜೆಪಿ ಸಂಸದರು ಜನರ ಜೊತೆ ಕಾಣಿಸಿಲ್ಲ. ನಾನು ಜನರ ಜೊತೆ ಕೆಲಸ ಮಾಡುತ್ತಿದ್ದೇನೆ. ಎಲ್ಲರೂ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಕೇಳುತ್ತಿದ್ದಾರೆ. ಅದಕ್ಕಾಗಿ ವೋಟ್ ಮಾಡುತ್ತೇವೆಂದು ಹೇಳುತ್ತಿದ್ದಾರೆ ಎಂದು ತಿಳಿಸಿದರು.
ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಅನ್ಯಾಯ ಆಗಿದೆ. ಕರ್ನಾಟಕದ ಬಗ್ಗೆ ಧ್ವನಿ ಎತ್ತಬೇಕಾದ ಸಂಸದರು ಧ್ವನಿ ಎತ್ತಲಿಲ್ಲ. ರಾಜ್ಯದ ಪರವಾಗಿ ಧ್ವನಿ ಎತ್ತುವ ಸಂಸದರು ಬೇಕಾಗಿದ್ದಾರೆ. ನನಗೆ ವಿಶ್ವಾಸವಿದೆ. ಜನರು ಕೈಬಿಡುವುದಿಲ್ಲ ಎಂದ ರಾಜೀವ್ ಗೌಡ, ಪೈಪೋಟಿ ಇರಲಿ, ಎದುರಿಸೋಣ ಎಂದು ಹೇಳಿದರು.
ಇದಕ್ಕೂ ಮುನ್ನ ನಗರದ ಸ್ವಾತಂತ್ರ್ಯ ಉದ್ಯಾನವನ (ಫ್ರೀಡಂ ಪಾರ್ಕ್) ದಲ್ಲಿ ನಡೆದ ಕಾಂಗ್ರೆಸ್ನ ಬೃಹತ್ ಸಮಾವೇಶದಲ್ಲಿ ಸಚಿವರಾದ ಕೃಷ್ಣ ಬೈರೇಗೌಡ, ಬೈರತಿ ಸುರೇಶ್, ಸಲೀಮ್ ಅಹಮದ್, ಮತ್ತು ಇತರ ಕಾಂಗ್ರೆಸ್ ನಾಯಕರು ಸಂವಿಧಾನದ ಪೀಠಿಕೆ ಓದುವ ಮೂಲಕ ಸಮಾವೇಶಕ್ಕೆ ಚಾಲನೆ ನೀಡಿದರು.