ಬೆಂಗಳೂರು: ನೂತನ ವರ್ಷವನ್ನು ಸ್ವಾಗತಿಸಲು ಬೆಂಗಳೂರು ಸಜ್ಜಾಗುತ್ತಿದ್ದು, ಡಿಸೆಂಬರ್ 31ರ ರಾತ್ರಿ 1 ಗಂಟೆಯವರೆಗೆ ಸಾರ್ವಜನಿಕವಾಗಿ ಹೊಸ ವರ್ಷಾಚರಣೆಗೆ ಅನುಮತಿಯಿದೆ. ಸಾರ್ವಜನಿಕರ ಸುರಕ್ಷತೆ ಹಾಗೂ ಅಹಿತಕರ ಘಟನೆಗಳು ಸಂಭವಿಸದಂತೆ ಬೆಂಗಳೂರು ಪೊಲೀಸರು ಮುನ್ನೆಚ್ಚರಿಕೆ ವಹಿಸಿದ್ದಾರೆ. ಭದ್ರತೆಯ ದೃಷ್ಟಿಯಿಂದ ಹಾಗೂ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗದಂತೆ ಯಾವ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂಬುದನ್ನು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ವಿವರಿಸಿದ್ದಾರೆ.
ಒಟ್ಟು 11830 ಜನ ಸಿಬ್ಬಂದಿಯಿಂದ ಭದ್ರತೆ:ಒಟ್ಟು ಇಬ್ಬರು ಹೆಚ್ಚುವರಿ ಪೊಲೀಸ್ ಆಯುಕ್ತರು, ಓರ್ವ ಜಂಟಿ ಪೊಲೀಸ್ ಆಯುಕ್ತರು, 15 ಜನ ಡಿಸಿಪಿಗಳು, 44 ಜನ ಎಸಿಪಿಗಳು, 135 ಇನ್ಸ್ಪೆಕ್ಟರ್ಸ್, 530 ಸಬ್ ಇನ್ಸ್ಪೆಕ್ಟರ್ಸ್, 655 ಸಹಾಯಕ ಸಬ್ ಇನ್ಸ್ಪೆಕ್ಟರ್ಸ್, 4833 ಕಾನ್ಸ್ಟೇಬಲ್ಸ್, 1048 ಮಹಿಳಾ ಪೊಲೀಸ್ ಸಿಬ್ಬಂದಿ, 597 ಜನ ಮಫ್ತಿ ಸಿಬ್ಬಂದಿ, 3170 ಗೃಹರಕ್ಷಕ ದಳದ ಸಿಬ್ಬಂದಿ, 800 ಜನ ಸಿವಿಲ್ ಡಿಫೆನ್ಸ್ ಸಿಬ್ಬಂದಿ ಸೇರಿದಂತೆ 11830 ಜನ ಸಿಬ್ಬಂದಿ ನಗರದಾದ್ಯಂತ ಭದ್ರತೆಗಾಗಿ ನಿಯೋಜನೆಗೊಂಡಿದ್ದಾರೆ. ಅದರ ಜೊತೆಗೆ 72 ಕೆಎಸ್ಆರ್ಪಿ ಪೊಲೀಸ್ ತುಕಡಿಗಳನ್ನು ಹೆಚ್ಚುರಿಯಾಗಿ ಭದ್ರತೆಗೆ ನಿಯೋಜಿಸಲಾಗಿದೆ.
ಎಂ.ಜಿ.ರಸ್ತೆ - ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್ಗಳಲ್ಲಿ 2,572 ಜನ ಪೊಲೀಸರ ಕಣ್ಗಾವಲು:ಇನ್ನು ಹೊಸ ವರ್ಷಾಚರಣೆಯ ಸಂದರ್ಭದಲ್ಲಿ ಹೆಚ್ಚು ಜನ ಸೇರುವ ಕೇಂದ್ರ ವಿಭಾಗದ ಬ್ರಿಗೇಡ್ ರಸ್ತೆ, ಎಂ.ಜಿ. ರಸ್ತೆ, ಒಪೆರಾ ಜಂಕ್ಷನ್, ರಿಚ್ಮಂಡ್ ರಸ್ತೆ, ರೆಸಿಡೆನ್ಸಿ ರಸ್ತೆ ವ್ಯಾಪ್ತಿಯಲ್ಲಿ ಐವರು ಡಿಸಿಪಿಗಳು, 18 ಎಸಿಪಿ, 41 ಜನ ಪೊಲೀಸ್ ಇನ್ಸ್ಪೆಕ್ಟರ್ಸ್ ಸೇರಿದಂತೆ ಒಟ್ಟು 2,572 ಜನ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ಭದ್ರತೆಗೆ ನಿಯೋಜನೆಗೊಳ್ಳಲಿದ್ದಾರೆ. ಅದೇ ರೀತಿ ಹೊಸ ವರ್ಷಾಚರಣೆಯನ್ನು ಸಾರ್ವಜನಿಕವಾಗಿ ಆಚರಿಸುವ ಎಂ.ಜಿ ರಸ್ತೆ, ಬ್ರಿಗೇಡ್ ರಸ್ತೆ, ರೆಸಿಡೆನ್ಸಿ ರಸ್ತೆ, ಸೈಂಟ್ ಮಾರ್ಕ್ಸ್ ರಸ್ತೆ, ಕಬ್ಬನ್ಪಾರ್ಕ್, ಟ್ರಿನಿಟಿ ಸರ್ಕಲ್, ಫೀನಿಕ್ಸ್ ಮಾಲ್, ಕೋರಮಂಗಲ, ಇಂದಿರಾನಗರ 100 ಫೀಟ್ ರಸ್ತೆ, ಪ್ರಮುಖ ಸ್ಟಾರ್ ಹೋಟೆಲ್ಗಳು, ಪಬ್ಗಳು, ಕ್ಲಬ್ಗಳು ಮುಂತಾದ ಸ್ಥಳಗಳಲ್ಲಿ ಜನಸಂದಣಿಯನ್ನು ನಿಯಂತ್ರಿಸಲು ಬಂದೋಬಸ್ತ್ ಹೆಚ್ಚಿಸಲಾಗಿದೆ.
ಸಂಭ್ರಮಾಚರಣೆ ನಡೆಯುವ ಇತರೆ ಪ್ರಮುಖ ಸ್ಥಳಗಳಾದ ಫೀನಿಕ್ಸ್ ಮಾಲ್, ಓರಾಯನ್ ಮಾಲ್, ಕೋರಮಂಗಲ, ಇಂದಿರಾನಗರ, ಮಾರತ್ ಹಳ್ಳಿ, ಹೆಚ್.ಆರ್.ಬಿ.ಆರ್ ಲೇಔಟ್, ಏರ್ಪೋರ್ಟ್ ರಸ್ತೆ, ವೈಟ್ ಫೀಲ್ಡ್ ಪ್ರದೇಶಗಳಲ್ಲಿ ಬಂದೋಬಸ್ತ್ ಕರ್ತವ್ಯಕ್ಕೆ 4 ಡಿಸಿಪಿ, 6 ಎಸಿಪಿಗಳು, 18 ಜನ ಇನ್ಸ್ಪೆಕ್ಟರ್ಸ್ ಸೇರಿದಂತೆ 2,414 ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಮಹಿಳೆಯರು, ಮಕ್ಕಳ ಸುರಕ್ಷತೆಗೆ ಕ್ರಮ:ಮಹಿಳೆಯರ ಸುರಕ್ಷತೆಗಾಗಿ ಪ್ರಮುಖ ಸ್ಥಳಗಳಲ್ಲಿ ಮಹಿಳಾ ಅಧಿಕಾರಿಗಳು ಮತ್ತು ಸಿಬ್ಬಂದಿಯಿರುವ ಮಹಿಳಾ ಸುರಕ್ಷತಾ ಸ್ಥಳ (Women Safety Island) ನಿರ್ಮಿಸಲಾಗಿದ್ದು, ಸದುಪಯೋಗ ಪಡಿಸಿಕೊಳ್ಳಬಹುದಾಗಿದೆ. ಜೊತೆಗೆ ಆಯಕಟ್ಟಿನ ಪ್ರದೇಶಗಳಲ್ಲಿ ಪೊಲೀಸ್ ಕಿಯೋಸ್ಕ್ಗಳನ್ನು (Police Kiosk) ತೆರೆದಿದ್ದು, ಮಕ್ಕಳು ಕಾಣೆಯಾದಲ್ಲಿ ಅಥವಾ ಯಾವುದೇ ರೀತಿಯ ಕಳವಿಗೆ ಸಂಬಂಧಿಸಿದ ದೂರುಗಳನ್ನು ನೀಡಬಹುದಾಗಿದೆ.
ಹೆಚ್ಚು ಜನಸಂದಣಿ ಸೇರುವ ಸ್ಥಳಗಳಲ್ಲಿ ಕಣ್ಣಾವಲು ಏರ್ಪಡಿಸಲು ಸಿಬ್ಬಂದಿಗೆ ವೀಕ್ಷಣಾ ಗೋಪುರಗಳನ್ನು ನಿರ್ಮಿಸಿದ್ದು, ವೀಕ್ಷಣಾ ಗೋಪುರಗಳಲ್ಲಿ ಕರ್ತವ್ಯಕ್ಕೆ ನೇಮಕ ಮಾಡಲಾಗುವ ಸಿಬ್ಬಂದಿಗೆ ಬೈನಾಕ್ಯುಲರ್ ಉಪಕರಣಗಳನ್ನು ಒದಗಿಸಲಾಗಿದೆ. 817 ಸಿಸಿಟಿವಿ ವೀಕ್ಷಣಾ ಘಟಕಗಳು 63 ವೀಕ್ಷಣಾ ಗೋಪುರಗಳು, 114 ಮಹಿಳಾ ಸುರಕ್ಷತಾ ಸ್ಥಳ (Women Safety Island) 48 ಪೊಲೀಸ್ ಕಿಯೋಕ್ಸ್, 54 ಆರೋಗ್ಯ ಸೇವಾ ಸೆಂಟರ್ಗಳನ್ನು ನಿರ್ಮಿಸಲಾಗಿದೆ.