ಮಾಜಿ ಡಿಸಿಎಂ ಡಾ.ಅಶ್ವತ್ಥನಾರಾಯಣ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. (ETV Bharat) ಬೆಂಗಳೂರು:ಹುಬ್ಬಳ್ಳಿಯ ನೇಹಾ ಹತ್ಯೆ, ಕೊಡಗಿನಲ್ಲಿ ಸೂರ್ಲಬ್ಬಿಯಲ್ಲಿ ವಿದ್ಯಾರ್ಥಿನಿ ಮೀನಾ ಕೊಲೆ ಬಳಿಕ ಇದೀಗ ಹುಬ್ಬಳ್ಳಿಯಲ್ಲಿ ಅಂಜಲಿ ಅಂಬಿಗೇರ ಎಂಬ ಯುವತಿಯ ಕೊಲೆಯಾಗಿದೆ. ಇಂದು ಬೆಳಗ್ಗೆ ಕೂಡ ಒಂದು ಮರ್ಡರ್ ಆಗಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ, ದುಷ್ಕೃತ್ಯಗಳನ್ನು ತಡೆಯುವಲ್ಲಿ ಗೃಹ ಇಲಾಖೆ ಸಂಪೂರ್ಣ ವಿಫಲವಾಗಿದೆ. ಕೂಡಲೇ ಗೃಹ ಸಚಿವ ಡಾ. ಜಿ ಪರಮೇಶ್ವರ್ ರಾಜೀನಾಮೆ ನೀಡಬೇಕು ಎಂದು ಮಾಜಿ ಡಿಸಿಎಂ ಡಾ. ಅಶ್ವತ್ಥನಾರಾಯಣ ಆಗ್ರಹಿಸಿದ್ದಾರೆ.
ಮಲ್ಲೇಶ್ವರದ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದು ಒಂದು ವರ್ಷ ಪೂರೈಸುತ್ತಿದೆ. ಒಂದು ವರ್ಷದಲ್ಲಿ ಕೊಲೆ ಸುಲಿಗೆ ಮತಾಂತರದ ತುಷ್ಟೀಕರಣದಿಂದ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಇದು ಶೂನ್ಯ ಅಭಿವೃದ್ಧಿ, ಅಸಮರ್ಥ ಸರ್ಕಾರವಾಗಿದೆ. ಕಾಂಗ್ರೆಸ್ ಸರ್ಕಾರ ವರ್ಗಾವಣೆ ದಂಧೆಯಲ್ಲಿ ಮುಳುಗಿದೆ ಎಂದು ಆರೋಪಿಸಿದರು.
ಅಪರಾಧ ಪ್ರಕರಣಗಳು ಹೆಚ್ಚಳ:ನ್ಯಾಷನಲ್ ಕ್ರೈಮ್ ಬ್ಯೂರೋ ಪ್ರಕಾರ ಕರ್ನಾಟಕದಲ್ಲಿ ಶೇಕಡ 60ರಷ್ಟು ಅಪರಾಧ ಪ್ರಕರಣಗಳು ಜಾಸ್ತಿಯಾಗಿವೆ. ನೇಹಾ ಹತ್ಯೆ ಬಳಿಕ, ಕೊಡಗಿನಲ್ಲಿ ಎಸ್ಎಸ್ಎಲ್ಸಿ ವಿದ್ಯಾರ್ಥಿನಿ ಮೀನಾ ಕೊಲೆಯಾಗಿದೆ. ನಂತರ ಹುಬ್ಬಳ್ಳಿಯಲ್ಲಿ ಅಂಜಲಿ ಕೊಲೆಯಾಗಿದೆ, ಈ ಸರ್ಕಾರದಿಂದ ಸುರಕ್ಷತೆಯೇ ಇಲ್ಲವಾಗಿದೆ ಎಂದು ಹರಿಹಾಯ್ದರು.
ಇಂಥ ಪ್ರಕರಣಗಳಲ್ಲಿ ಸರ್ಕಾರದ ಮೇಲೆ ಒತ್ತಡ ಹಾಕುವ ರೀತಿಯಲ್ಲಿ ನಾವು ಹೋರಾಟ ಮಾಡುತ್ತೇವೆ. ಆದರೆ ಹೋರಾಟ ಮಾಡಿದರೂ ಈ ಭಂಡ ಸರ್ಕಾರ ಹಾಗೆಯೇ ಇದೆ. ಆಡಳಿತ ವ್ಯವಸ್ಥೆ ಸಂಪೂರ್ಣವಾಗಿ ಕುಸಿದುಹೋಗಿದೆ. ಗೃಹ ಇಲಾಖೆಯಲ್ಲಿ ದುಡ್ಡು ತಗೊಂಡು ವರ್ಗಾವಣೆ ಮಾಡುತ್ತಿದ್ದಾರೆ. ಪರಮೇಶ್ವರ ಅಸಹಾಯಕರಾಗಿದ್ದಾರೆ, ಗೃಹ ಇಲಾಖೆಯಲ್ಲಿ ಬೇರೆಯವರ ಹಸ್ತಕ್ಷೇಪ ಹೆಚ್ಚಾಗಿದೆ. ಇದರ ನೈತಿಕ ಹೊಣೆ ಹೊತ್ತು ಪರಮೇಶ್ವರ್ ರಾಜೀನಾಮೆ ನೀಡಬೇಕು ಎಂದು ಮಾಜಿ ಡಿಸಿಎಂ ಒತ್ತಾಯಿಸಿದರು.
ಸಂಸದ ಪ್ರಜ್ವಲ್ ರೇವಣ್ಣ ನಾಪತ್ತೆ ಪ್ರಕರಣ ಕುರಿತು ಪ್ರತಿಕ್ರಿಯೆ ನೀಡಿದ ಅಶ್ವತ್ಥನಾರಾಯಣ, ಪ್ರಜ್ವಲ್ ವಿಚಾರದಲ್ಲಿ ಗೃಹ ಇಲಾಖೆ ಹಾಗೂ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ. ರಾಜಕೀಯ ದುರುದ್ದೇಶದಿಂದ ಇದನ್ನು ಸರ್ಕಾರವೇ ಮಾಡಿದೆ, ಇಂತಹ ವ್ಯಕ್ತಿಯನ್ನು ದೇಶ ಬಿಟ್ಟು ಹೊರಗೆ ಹೋಗಲು ಹೇಗೆ ಬಿಟ್ಟರು ಎಂದು ಪ್ರಶ್ನಿಸಿದರು.
ಸರ್ಕಾರಕ್ಕೆ ಸೂಕ್ಷ್ಮತೆ ಇಲ್ಲ, ಆ ಹೆಣ್ಣುಮಕ್ಕಳ ಮೇಲೆ ಕಾಳಜಿ ಇಲ್ಲ. ಒಂದು ವೇಳೆ ನಿಮ್ಮ ಮನೆಯ ಮಕ್ಕಳಿಗೆ ಈ ರೀತಿ ಆದರೆ ನೀವು ಸುಮ್ಮನೆ ಇರ್ತೀರಾ ರೆಡ್ ಕಾರ್ನರ್ ನೋಟಿಸ್, ಬ್ಲೂ ಕಾರ್ನರ್ ನೋಟಿಸ್ ಕೊಡೋದು ಗೊತ್ತಿದ್ದರು ಅವರನ್ನು ಹೇಗೆ ಹೊರಗೆ ಬಿಟ್ಟರು. ಇವರೇ ಆ ವ್ಯಕ್ತಿಯನ್ನು ಹೊರಗೆ ಕಳುಹಿಸಿಕೊಟ್ಟಿದ್ದಾರೆ. ಈಗ ಅದನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತಿದ್ದಾರೆ. ಪ್ರತಿಪಕ್ಷದ ರೀತಿ ಮಾತಾಡೋದು ಬಿಟ್ಟು ಯಾರೇ ಆಗಲಿ, ಅಂತಹ ವ್ಯಕ್ತಿಯ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಲಿ ಎಂದು ಒತ್ತಾಯಿಸಿದರು. ಈ ವೇಳೆ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ ರಾಜೀವ್ ಸೇರಿದಂತೆ ಇತರರು ಹಾಜರಿದ್ದರು.
ಇದನ್ನೂಓದಿ:ಅಂಜಲಿ ಕುಟುಂಬದ ಶಿಕ್ಷಣದ ಜವಾಬ್ದಾರಿಯನ್ನು ಶಿರಹಟ್ಟಿಯ ಮಠ ನೋಡಿಕೊಳ್ಳುತ್ತದೆ; ಫಕೀರ ದಿಂಗಾಲೇಶ್ವರ ಶ್ರೀ - Anjali murder case