ಬೆಂಗಳೂರು: ಇತ್ತೀಚಿಗೆ ನಗರದ ಹಲಸೂರು ಗೇಟ್‌ನಲ್ಲಿ ನಡೆದಿದ್ದ ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 11 ಆರೋಪಿಗಳ ವಿರುದ್ಧ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹತ್ಯೆಯಾದ ಸುರೇಶ್ ಪುತ್ರಿ ವಿನುತಾ ನೀಡಿದ ದೂರಿನನ್ವಯ ಬದ್ರಿಪ್ರಸಾದ್, ಮುನಿಸ್ವಾಮಿ, ರಾಜಪ್ಪ, ಮಹೇಶ್, ವೆಂಕಟೇಶ್, ಚಂದ್ರಶೇಖರ, ರವಿಶಂಕರ್, ಶಿವಕುಮಾರ್, ರಾಮಪ್ಪ, ಶಶಿಕಲಾ ಹಾಗೂ ಚೆನ್ನಕೃಷ್ಣಪ್ಪ ಎಂಬವರ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
ದೂರಿನ ವಿವರ: ಕುಂಬಾರಪೇಟೆ ಅನ್ನದಾನ ಸಮಿತಿ ಟ್ರಸ್ಟ್ ಹಾಗೂ ಕುಂಬಾರಪೇಟೆಯ ಆಂಜನೇಯ ಸ್ವಾಮಿ ಬಿಲ್ಡಿಂಗ್ ಸಮಿತಿ ಟ್ರಸ್ಟ್ ಮತ್ತು ಕುಂಬಾರ ಪೇಟೆ ಅನ್ನದಾನ ಸಮಿತಿ ಕಲ್ಯಾಣ ಮಂದಿರ ಟ್ರಸ್ಟ್ ಆಸ್ತಿಯ ವಿಚಾರವಾಗಿ ಸುರೇಶ್ ಹಾಗೂ ಬದ್ರಿಪ್ರಸಾದ್ ನಡುವೆ ಸಿವಿಲ್ ವ್ಯಾಜ್ಯವಿತ್ತು. ನಂತರ ಕೋರ್ಟ್ ತೀರ್ಪು ಸುರೇಶ್ ಪರವಾಗಿ ಬಂದಿತ್ತು. ಇದೇ ವಿಚಾರವಾಗಿ ಕಳೆದ ಏಪ್ರಿಲ್‌ನಲ್ಲಿ ಆರೋಪಿಗಳು ಸುರೇಶ್ ಮತ್ತು ಅವರ ಪತ್ನಿಯ ಮೇಲೆ ಹಲ್ಲೆ ಮಾಡಿದ್ದರು. ಈ ಬಗ್ಗೆ ಸುರೇಶ್ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪ್ರಕರಣ ನ್ಯಾಯಾಲಯದ ಮುಂದೆ ವಿಚಾರಣೆಯಲ್ಲಿದೆ.
ಇದಾದ ನಂತರವೂ ಸಹ ಆಸ್ತಿ ವಿಚಾರವಾಗಿ ಆರೋಪಿಗಳು ಸುರೇಶ್ ವಿರುದ್ಧ ಸಿಟಿ ಮಾರ್ಕೆಟ್ ಠಾಣೆಯಲ್ಲಿ ಸುಳ್ಳು ಆರೋಪದ ದೂರು ನೀಡಿದ್ದು, ಅದರಲ್ಲೂ ಸುರೇಶ್ ಪರವಾಗಿಯೇ ತೀರ್ಪು ಬಂದಿತ್ತು. ಇದೇ ಜಿದ್ದಿನಿಂದ ಇತರೆ ಆರೋಪಿಗಳ ಕುಮ್ಮಕ್ಕಿನಿಂದ ಆರೋಪಿ ಬದ್ರಿಪ್ರಸಾದ್ ಕೃತ್ಯ ಎಸಗಿದ್ದಾರೆ. ಆದ್ದರಿಂದ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಹಾಗೂ ತಮ್ಮ ಕುಟುಂಬಕ್ಕೆ ರಕ್ಷಣೆ ಒದಗಿಸುವಂತೆ ಅವರು ಪೊಲೀಸರಿಗೆ ದೂರು ನೀಡಿದ್ದರು. ಇದೀಗ ಆರೋಪಿ ಬದ್ರಿ ಪ್ರಸಾದ್ನನ್ನು ಬಂಧಿಸಿರುವ ಹಲಸೂರು ಗೇಟ್ ಠಾಣೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.