ಬೆಂಗಳೂರು:ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಜೂನ್ 14 ರಿಂದ 22 ರವರೆಗೆ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳ ಪರೀಕ್ಷೆ-2 ನಡೆಯಲಿದ್ದು, ಹಾಜರಾಗುವ ವಿದ್ಯಾರ್ಥಿಗಳು ಪರೀಕ್ಷಾ ದಿನ ಬಸ್‌ನಲ್ಲಿ ಉಚಿತವಾಗಿ ಪ್ರಯಾಣಿಸಲು ಬೃಹತ್ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಅವಕಾಶ ಕಲ್ಪಿಸಲಾಗಿದೆ.
ಪರೀಕ್ಷೆಯು ಬೇರೆ ಬೇರೆ ಪರೀಕ್ಷಾ ಕೇಂದ್ರಗಳಲ್ಲಿ ಇರುವುದರಿಂದ ಸಂಸ್ಥೆಯು ವಿದ್ಯಾರ್ಥಿಗಳ ಹಿತವನ್ನು ಗಮನದಲ್ಲಿಟ್ಟುಕೊಂಡು ಪರೀಕ್ಷೆಗಳು ನಡೆಯುವ ದಿನಾಂಕಗಳಂದು ಪರೀಕ್ಷೆಗೆ ಹಾಜರಾಗಲು ವಾಸಸ್ಥಳದಿಂದ ನಿಯೋಜಿತ ಪರೀಕ್ಷಾ ಕೇಂದ್ರದವರೆಗೆ ಹೋಗುವಾಗ ಮತ್ತು ಹಿಂದಿರುಗುವಾಗ ಸಾಮಾನ್ಯ ಸೇವೆಗಳಲ್ಲಿ ಪರೀಕ್ಷಾ ಪ್ರವೇಶ ಪತ್ರವನ್ನು ತೋರಿಸಿ, ಉಚಿತವಾಗಿ ಪ್ರಯಾಣಿಸಲು ಸಂಸ್ಥೆ ಅವಕಾಶ ಕಲ್ಪಿಸಲಾಗಿದೆ.
ಎಸ್ಎಸ್ಎಲ್ಸಿ ಪರೀಕ್ಷೆ-02 ರ ದಿನಾಂಕಗಳಂದು ಪರೀಕ್ಷಾ ಕೇಂದ್ರಗಳ ಮಾರ್ಗಗಳಲ್ಲಿ ಕಡ್ಡಾಯವಾಗಿ ಎಲ್ಲ ಮಾರ್ಗಗಳನ್ನು, ಸುತ್ತುವಳಿಗಳನ್ನು ಕಾರ್ಯಾಚರಣೆಗೊಳಿಸಲಾಗುವುದು. ಹೆಚ್ಚುವರಿ ಸುತ್ತುವಳಿಗಳ ಕಾರ್ಯಾಚರಣೆಯ ಅಗತ್ಯತೆ ಕಂಡುಬಂದಲ್ಲಿ ಕಾರ್ಯಾಚರಣೆ ಮಾಡಲಾಗುವುದು. ಪರೀಕ್ಷಾ ಕೇಂದ್ರಗಳ ಬಳಿ ವಿದ್ಯಾರ್ಥಿಗಳು/ಪೋಷಕರು ಕೋರಿಕೆ ನಿಲುಗಡೆ ಕೋರಿದಲ್ಲಿ, ಕೋರಿಕೆ ನಿಲುಗಡೆ ನೀಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ದಂಡ ವಸೂಲಿ: ಬಿಎಂಟಿಸಿ ವಾಹನಗಳಲ್ಲಿ ಸಂಚರಿಸುವ ಪ್ರಯಾಣಿಕರು ಟಿಕೆಟ್ ಪಡೆಯದೇ ಅನಧಿಕೃತವಾಗಿ ಪ್ರಯಾಣ ಮಾಡುವವರನ್ನು ಮತ್ತು ಸಂಸ್ಥೆಯ ಸಾರಿಗೆ ಆದಾಯದ ಸೋರಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ, ನಗರದಾದ್ಯಂತ ಸಂಚರಿಸುವ ವಾಹನಗಳನ್ನು ನಮ್ಮ ಸಂಸ್ಥೆಯ ತನಿಖಾ ತಂಡಗಳು ಏಪ್ರಿಲ್-2024 ರ ಮಾಹೆಯಲ್ಲಿ ಒಟ್ಟು 19,146 ಟ್ರಿಪ್‍ಗಳನ್ನು ತಪಾಸಿಸಿದ್ದು, 3924 ಟಿಕೆಟ್ ರಹಿತ ಪ್ರಯಾಣಿಕರನ್ನು ಪತ್ತೆ ಹಚ್ಚಿದೆ. ಅಲ್ಲದೇ, ಅವರಿಂದ ಒಟ್ಟು ರೂ. 7,95,540/- ದಂಡ ವಸೂಲಿ ಮಾಡಿ ಸಂಸ್ಥೆಯ ನಿರ್ವಾಹಕರ ವಿರುದ್ಧ 1023 ಪ್ರಕರಣಗಳನ್ನು ದಾಖಲಿಸಿದೆ.
ಮಹಿಳಾ ಪ್ರಯಾಣಿಕರಿಗೆಂದೇ ಮೀಸಲಾಗಿರುವ ಆಸನಗಳಲ್ಲಿ ಕುಳಿತು ಪ್ರಯಾಣಿಸಿರುವ 489 ಪುರುಷ ಪ್ರಯಾಣಿಕರಿಂದ ಒಟ್ಟು ರೂ. 48,900/- ಅನ್ನು ಮೋಟಾರು ವಾಹನ ಕಾಯ್ದೆ 1988ರ ಕಾಲಂ 177 ಮತ್ತು 94ರ ಪ್ರಕಾರ ದಂಡ ವಿಧಿಸಲಾಗಿರುತ್ತದೆ. ಒಟ್ಟಾರೆಯಾಗಿ ಏಪ್ರಿಲ್-2024ರ ಮಾಹೆಯಲ್ಲಿ 4,413 ಪ್ರಯಾಣಿಕರಿಂದ ಒಟ್ಟು ರೂ. 8,44,440/- ದಂಡವನ್ನು ವಸೂಲಿ ಮಾಡಲಾಗಿದೆ.
ಪ್ರಯಾಣಿಕರು ಸಂಸ್ಥೆಯ ವಾಹನಗಳಲ್ಲಿ ಪ್ರಯಾಣಿಸುವಾಗ ಅಧಿಕೃತ ಟಿಕೆಟ್/ದಿನದ ಪಾಸು/ಮಾಸಿಕ ಪಾಸುಗಳನ್ನು ಹೊಂದಿ ಪ್ರಯಾಣಿಸುವುದು. ಇದರಿಂದ ಅನಗತ್ಯ ದಂಡ ಕಟ್ಟುವುದನ್ನು ತಡೆಯಬಹುದಾಗಿದೆ ಹಾಗೂ ಇಂತಹ ಪ್ರವೃತ್ತಿಯಿಂದ ಸಂಸ್ಥೆಯು ಉತ್ತಮ ಸೇವೆಯನ್ನು ಪ್ರಯಾಣಿಕರಿಗೆ ನೀಡಲು ಸಹಾಯವಾಗುತ್ತದೆ. ಮಹಿಳಾ ಪ್ರಯಾಣಿಕರಿಗೆಂದೇ ಮೀಸಲಾಗಿರುವ ಆಸನಗಳಲ್ಲಿ ಪುರುಷ ಪ್ರಯಾಣಿಕರು ಆಸನಗಳನ್ನು ತೆರವು ಮಾಡಿಕೊಡುವ ಮೂಲಕ ಅವರಿಗೆ ಕುಳಿತುಕೊಳ್ಳಲು ಅವಕಾಶ ನೀಡುವಂತೆ ಪ್ರಕಟಣೆ ಮೂಲಕ ಬಿಎಂಟಿಸಿ ತಿಳಿಸಿದೆ.
ಇದನ್ನೂ ಓದಿ:ನೀಟ್ ಪರೀಕ್ಷೆಯಲ್ಲಿ ಪ್ರಥಮ ರ‍್ಯಾಂಕ್; ಸಾಧನೆ ಬಗ್ಗೆ ವಿದ್ಯಾರ್ಥಿ ಕಲ್ಯಾಣ್ ಹೇಳಿದ್ದೇನು? - NEET Topper