ಬೆಂಗಳೂರು:"ಗಲಾಟೆ ಮಾಡಬೇಡಿ" ಎಂದಿದ್ದಕ್ಕೆ ಬಿಎಂಟಿಸಿ ಚಾಲಕನ ಮೇಲೆ ಕಿಡಿಗೇಡಿಗಳು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿರುವ ಘಟನೆ ಕುಮಾರಸ್ವಾಮಿ ಲೇಔಟ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಏಪ್ರಿಲ್ 4ರಂದು ಚಾಲಕ ನಾಗೇಂದ್ರ ಹಾಗೂ ನಿರ್ವಾಹಕ ಮಹೇಶ್ ಕರ್ತವ್ಯ ಮುಗಿಸಿ ಕುಮಾರಸ್ವಾಮಿ ಲೇಔಟ್‍ನ 15E ನಿಲ್ದಾಣದಲ್ಲಿ ಬಸ್ ನಿಲ್ಲಿಸಿ ಮಲಗಿದ್ದರು. ರಾತ್ರಿ 12.30ರ ಸಮಯದಲ್ಲಿ ಪಾನಮತ್ತರಾಗಿ ಸ್ಥಳಕ್ಕೆ ಬಂದಿದ್ದ ನಾಲ್ವರು ಜೋರಾಗಿ ಕೂಗಾಡುತ್ತಿದ್ದರು. ಎಚ್ಚರಗೊಂಡ ಬಸ್ ಚಾಲಕ ನಾಗೇಂದ್ರ, "ಯಾಕೆ ಗಲಾಟೆ ಮಾಡುತ್ತಿದ್ದೀರಿ, ಕೂಗಾಡಬೇಡಿ" ಎಂದಿದ್ದರು. ಸಿಟ್ಟಿಗೆದ್ದ ಆರೋಪಿಗಳು ನಾಗೇಂದ್ರರನ್ನು ಉದ್ದೇಶಿಸಿ ಅವಾಚ್ಯವಾಗಿ ನಿಂದಿಸುತ್ತಾ, "ನಾವು ಏನಾದರೂ ಮಾಡುತ್ತೇವೆ ನಿನಗ್ಯಾಕೆ?" ಎಂದಿದ್ದಾರೆ.
ಈ ವೇಳೆ ಬಸ್‍ನಿಂದ ಕೆಳಗಿಳಿದ ನಾಗೇಂದ್ರ, "ಯಾಕೆ ಬೈಯುತ್ತಿದ್ದೀರಿ" ಎಂದಾಗ ಆರೋಪಿಯೊಬ್ಬ ಕೈಯಿಂದ ನಾಗೇಂದ್ರ ಅವರ ಮುಖಕ್ಕೆ ಹಲ್ಲೆ ಮಾಡಿ, ಮಚ್ಚು ಬೀಸಿದ್ದಾನೆ. ಈ ವೇಳೆ ತಪ್ಪಿಸಿಕೊಳ್ಳಲು ಕೈ ಅಡ್ಡ ಹಾಕಿದಾಗ ಎರಡು ಬೆರಳುಗಳಿಗೆ ಪೆಟ್ಟು ಬಿದ್ದಿದೆ. ತಕ್ಷಣ ನಿರ್ವಾಹಕ ಮಹೇಶ್ ಸಹಾಯಕ್ಕೆ ಧಾವಿಸಿದಾಗ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.