ಕರ್ನಾಟಕ

karnataka

ETV Bharat / state

ಮದುವೆಯಾಗಲು ನಿರಾಕರಿಸಿದ ವಿವಾಹಿತ ಮಹಿಳೆಯ ಕೊಂದು ಆತ್ಮಹತ್ಯೆಗೆ ಶರಣಾದ ವ್ಯಕ್ತಿ - MAN KILLS WOMAN

ಮದುವೆಯಾಗಲು ನಿರಾಕರಿಸಿದ ವಿವಾಹಿತ ಮಹಿಳೆಯನ್ನು ಕೊಲೆಗೈದು ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಆತ್ಮಹತ್ಯೆಗೆ ಶರಣಾದ ವ್ಯಕ್ತಿ
ಆತ್ಮಹತ್ಯೆಗೆ ಶರಣಾದ ವ್ಯಕ್ತಿ (ETV Bharat)

By ETV Bharat Karnataka Team

Published : Dec 12, 2024, 10:52 PM IST

ಬೆಂಗಳೂರು: ಮದುವೆಗೆ ನಿರಾಕರಿಸಿದ ವಿವಾಹಿತ ಮಹಿಳೆಯನ್ನು ಚಾಕುವಿನಿಂದ ಇರಿದು ಕೊಂದು, ಬಳಿಕ ಬಂಧನ ಭೀತಿಯಿಂದ ತಾನೂ ಆತ್ಮಹತ್ಯೆಗೆ ಶರಣಾಗಿರುವ ಘಟನೆ ವೈಟ್ ಫೀಲ್ಡ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಮೋವುಹಾ ಮಂಡಲ್ (26) ಹತ್ಯೆಯಾದ ಮಹಿಳೆ. ಕೃತ್ಯವೆಸಗಿದ ಬಳಿಕ ಬಂಧನ ಭೀತಿಯಿಂದ ಮಿಥುನ್ ಮಂಡಲ್ (40) ಆತ್ಮಹತ್ಯೆಗೆ ಶರಣಾಗಿದ್ದಾನೆ. ಹತ್ಯೆ ಹಾಗೂ ಆತ್ಮಹತ್ಯೆ ಪ್ರಕರಣ ದಾಖಲಿಸಿಕೊಂಡಿರುವುದಾಗಿ ವೈಟ್‌ಫೀಲ್ಡ್‌ ಪೊಲೀಸರು ತಿಳಿಸಿದ್ದಾರೆ.

ಪಶ್ಚಿಮ ಬಂಗಾಳದ ಮಿಥುನ್ ಮಂಡಲ್ ಕಳೆದ ಏಳೆಂಟು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿದ್ದ. ಹೌಸ್ ಕೀಪಿಂಗ್ ಹಾಗೂ ಸೂಪರ್ ವೈಸರ್ ಆಗಿ ಕೆಲಸ ಮಾಡುತ್ತಿದ್ದ ವೈಟ್ ಫೀಲ್ಡ್​​ನ ಪ್ರಶಾಂತ್ ಲೇಔಟ್‌ನ ಪಿಜಿಯೊಂದರಲ್ಲಿ ನೆಲೆಸಿದ್ದ. ಕೆಲ ತಿಂಗಳ ಹಿಂದೆ ಮೋವುಹಾ ಮಂಡಲ್​​ನ ಪರಿಚಯವಾಗಿದೆ. ಮಹಿಳೆಯು ಹೌಸ್ ಕೀಪಿಂಗ್ ಕೆಲಸ ಮಾಡುತ್ತಿದ್ದು, ಐಟಿಪಿಎಲ್ ಬಳಿಯ ಸಾವಿತ್ರಮ್ಮ ಶೆಡ್​​ವೊಂದರಲ್ಲಿ ವಾಸವಾಗಿದ್ದರು. ಈಕೆಗೆ ಮೂರು ವರ್ಷದ ಹೆಣ್ಣು ಮಗುವಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರು ತಿಂಗಳ ಹಿಂದೆ ಪರಿಚಿತರಾಗಿದ್ದ ಮೋವುಹಾ ಮಂಡಲ್​​ಗೆ ತನ್ನನ್ನು ಪ್ರೀತಿಸುವಂತೆ ನಿವೇದಿಸಿಕೊಂಡಿದ್ದ. ತನಗೆ ಮದುವೆಯಾಗಿದೆ ಎಂದು ಹೇಳಿದರೂ ಗಂಡನನ್ನು ತೊರೆದು ತನ್ನ ಜೊತೆಯಿರುವಂತೆ ಒತ್ತಡ ಹೇರಿದ್ದ. ಈತನ ಒತ್ತಡಕ್ಕೆ ಮಣಿಯದೆ ಆತನೊಂದಿಗೆ ಗಲಾಟೆ ಮಾಡಿಕೊಂಡಿದ್ದಳು. ಇದರಿಂದ ತಲೆಕೆಡಿಸಿಕೊಂಡು ಕೆಲಸಕ್ಕೆ ಹೋಗುತ್ತಿರಲಿಲ್ಲ. ಖರ್ಚಿಗಾಗಿ ಸ್ನೇಹಿತರಿಂದ ಕೈಸಾಲ ಪಡೆದಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಪ್ರೀತಿಸಿದ್ದ ವಿವಾಹಿತೆಯನ್ನು ಒಲಿಸಿಕೊಳ್ಳಲು ವಿಫಲವಾದ ಪರಿಣಾಮ ಆಕೆ ಮೇಲೆ ಮಿಥುನ್ ಹಗೆತನ ಸಾಧಿಸಿದ್ದ. ಸಾಯಿಸುವ ಸಂಚು ರೂಪಿಸಿದ ಮಿಥುನ್, ಬುಧವಾರ ರಾತ್ರಿ ಆಕೆಯ ಮನೆಯಲ್ಲಿ ಯಾರು ಇಲ್ಲದಿರುವಾಗ ಹೋಗಿ ಚಾಕುವಿನಿಂದ ಕುತ್ತಿಗೆ ಕೊಯ್ದು ಹತ್ಯೆ ಮಾಡಿ ಪರಾರಿಯಾಗಿದ್ದ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಾಗಿ ರಾತ್ರಿಯಿಡೀ ಶೋಧ ನಡೆಸಿದ್ದರು. ಇಂದು ಬೆಳಗ್ಗೆ ನಲ್ಲೂರಹಳ್ಳಿ ಕೆರೆಯ ಮರವೊಂದಕ್ಕೆ ಮಿಥುನ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಬೆಳಕಿಗೆ ಬಂದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:ದೇಹದಾನ ಮಾಡುವುದು ಹೇಗೆ? ನೋಂದಣಿ ಹಾಗೂ ಕಾನೂನು ಪ್ರಕ್ರಿಯೆಗಳು ಹೇಗಿರುತ್ತವೆ?

ABOUT THE AUTHOR

...view details