ಬೆಳಗಾವಿ:2024ಕ್ಕೆ ಗುಡ್ ಬೈ ಹೇಳಿ 2025ನ್ನು ವೆಲ್ ಕಮ್ ಮಾಡಲು ಎಲ್ಲರೂ ತುದಿಗಾಲ ಮೇಲೆ ನಿಂತಿದ್ದಾರೆ. ಹಳೆ ವರ್ಷದ ಕಹಿ ಘಟನೆಗಳನ್ನು ಮರೆತು, ಹೊಸ ಗುರಿ-ಕನಸುಗಳೊಂದಿಗೆ ಹೊಸ ವರ್ಷಕ್ಕೆ ಕಾಲಿಡಲು ಯುವಕ-ಯುವತಿಯರು ಉತ್ಸುಕರಾಗಿದ್ದಾರೆ. ಈ ಬಗ್ಗೆ ಬೆಳಗಾವಿ ಯುವ ಮನಸ್ಸುಗಳು ಈಟಿವಿ ಭಾರತದ ಜೊತೆ ಮುಕ್ತವಾಗಿ ಮಾತಾಡಿದ್ದಾರೆ.
ವಿದ್ಯಾರ್ಥಿನಿ ಮುಕ್ತಾ ಹೆಗಡೆ ಈಟಿವಿ ಭಾರತದ ಜೊತೆಗೆ ಮಾತನಾಡಿ, ''ಹೊಸ ವರ್ಷದಲ್ಲಿ ಒಂದಿಷ್ಟು ಪುಸ್ತಕಗಳನ್ನು ಓದಬೇಕು ಅಂದುಕೊಂಡಿದ್ದೇನೆ. ಸಹನಾ ವಿಜಯಕುಮಾರ ಅವರ ಮಾಘದಾನ ಕಶಿರ, ವಸುದೇಂದ್ರ ಅವರು ರಚಿಸಿದ ಎಲ್ಲಾ ಪುಸ್ತಕಗಳನ್ನು ಓದುವ ಗುರಿ ಹಾಕಿಕೊಂಡಿದ್ದೇನೆ. ಜೊತೆಗೆ, ಹೊಲಿಗೆ, ಎಂಬ್ರಾಯಿಡರಿ ಕಲಿಯುವ ಆಸೆಯಿದೆ. ಸಮಾಜಕ್ಕೆ ಸಂದೇಶ ನೀಡುವ ನಿಟ್ಟಿನಲ್ಲಿ ಒಳ್ಳೆಯ ಸುದ್ದಿಗಳನ್ನು ವರದಿ ಮಾಡುವ ಉದ್ದೇಶದಿಂದ ಪತ್ರಿಕೋದ್ಯಮ ಪದವಿ ಆಯ್ದುಕೊಂಡಿದ್ದೇನೆ. ಎಲ್ಲರಿಗೂ ಹೊಸ ವರ್ಷ ಒಳ್ಳೆಯದು ಮಾಡಲಿ'' ಎಂದು ಶುಭ ಹಾರೈಸಿದರು.
''ಹೊಸ ವರ್ಷಕ್ಕೆ ಯಾವುದೇ ಪ್ಲಾನ್ ಮಾಡಿಕೊಂಡಿಲ್ಲ. ಆದರೆ, ಪರೀಕ್ಷೆಗೆ ಎರಡು ಗಂಟೆ ಇರುವಾಗ ಓದುವುದು ಬಿಟ್ಟು ಮೊದಲೇ ಓದಬೇಕೆಂದು ನಿರ್ಧರಿಸಿದ್ದೇನೆ. ಪರೀಕ್ಷೆ ಸಮಯದಲ್ಲಿ ಒತ್ತಡ ಹಾಕಿಕೊಳ್ಳದೆ ಚಿಲ್ ಮಾಡಿ ಪರೀಕ್ಷೆ ಬರೆಯಬೇಕು ಅಂದುಕೊಂಡಿದ್ದೇನೆ'' ಎನ್ನುತ್ತಾರೆ ಮತ್ತೋರ್ವ ವಿದ್ಯಾರ್ಥಿನಿ ಪವಿತ್ರಾ.
ವಿದ್ಯಾರ್ಥಿ ಬಸವರಾಜ ಹುರಕಡ್ಲಿ ಪ್ರತಿಕ್ರಿಯಿಸಿದ್ದು, ''ಸಮಾಜದಲ್ಲಿ ಎಲ್ಲಾ ಕೆಡಕು, ತೊಡಕುಗಳು ನಿವಾರಣೆ ಆಗಲಿ. ಎಲ್ಲೆಡೆ ಶಾಂತಿ ನೆಲೆಸಲಿ ಎಂದು ನಾನು ಆಶಿಸುತ್ತೇನೆ. ಭವಿಷ್ಯದಲ್ಲಿ ನನ್ನಿಂದ ಸಮಾಜಕ್ಕೆ ಒಳ್ಳೆಯದು ಮಾಡುವ ಆಶಯ ಹೊಂದಿದ್ದೇನೆ. ಹೊಸ ಕನಸಿನೊಂದಿಗೆ ಹೊಸ ವರ್ಷಕ್ಕೆ ಕಾಲಿಡುತ್ತೇನೆ'' ಎಂದು ಹೇಳಿದರು.