ಬೆಳಗಾವಿ: ಖಾನಾಪುರ ತಾಲೂಕಿನ ಲೋಂಡಾ ಬಳಿ ಚಲಿಸುತ್ತಿದ್ದ ರೈಲಿನಲ್ಲಿ ಮುಸುಕುಧಾರಿ ವ್ಯಕ್ತಿಯಿಂದ ಹಲ್ಲೆಗೊಳಗಾದ ಗಾಯಾಳುಗಳ ಆರೋಗ್ಯವನ್ನು ರೈಲ್ವೆ ಡಿಐಜಿ ಶರಣಪ್ಪ ವಿಚಾರಿಸಿದರು. ಬೆಳಗಾವಿ ಜಿಲ್ಲಾಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಟಿ.ಟಿ ಸೇರಿ ನಾಲ್ವರು ಗಾಯಾಳುಗಳನ್ನು ಡಿಐಜಿ ಮಾತನಾಡಿಸಿದ್ದಾರೆ.
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಡಿಐಜಿ, ಐಪಿಸಿ ಸೆಕ್ಷನ್ 302, 307, 332, 353 ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಪುದುಚೇರಿ ದಾದರ್ ಎಕ್ಸ್ಪ್ರೆಸ್ ರೈಲಿನಲ್ಲಿ ಈ ಘಟನೆ ನಡೆದಿದೆ. ಅನಾಮಿಕ ಪ್ರಯಾಣಿಕ ಟಿಕೆಟ್ ವಿಚಾರಕ್ಕೆ ಟಿಟಿ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದಾನೆ. ಅವರ ಸಹಾಯಕ್ಕೆ ಬಂದ ಕೋಚ್ ಹೆಲ್ಪಿಂಗ್ ಸ್ಟಾಫ್ ಮೇಲೆಯೂ ಹಲ್ಲೆ ಆಗಿದೆ. ಆ ಪೈಕಿ ಓರ್ವ ಸಾವನ್ನಪ್ಪಿದ್ದಾನೆ ಎಂದು ಮಾಹಿತಿ ನೀಡಿದರು.
ಈಗಾಗಲೇ ರೈಲ್ವೆ ಇಲಾಖೆಯೊಂದಿಗೆ ಮಾತನಾಡಿದ್ದೇವೆ. ಮೃತನ ಕುಟುಂಬಕ್ಕೆ ರೈಲ್ವೆ ಇಲಾಖೆಯಿಂದ ಪರಿಹಾರ ನೀಡಲಾಗುತ್ತಿದೆ. ದೇವರ್ಷಿ ವರ್ಮಾ ಕುಟುಂಬಕ್ಕೆ ಪರಿಹಾರ ನೀಡಲಾಗುವುದು ಎಂದ ಡಿಐಜಿ ಶರಣಪ್ಪ, ಹಲ್ಲೆ ಮಾಡಿದ ಆರೋಪಿ ಪತ್ತೆಗೆ ಆರ್ಪಿಎಫ್, ಜಿಆರ್ಪಿ ಮತ್ತು ಸ್ಥಳೀಯ ಪೊಲೀಸ್ ನೇತೃತ್ವದಲ್ಲಿ ತಂಡ ರಚನೆ ಮಾಡಲಾಗಿದೆ. ನಾಲ್ಕು ವಿಶೇಷ ತಂಡಗಳನ್ನು ಈಗಾಗಲೇ ರಚನೆ ಮಾಡಲಾಗಿದ್ದು, ತನಿಖೆ ಕೈಗೊಂಡಿದ್ದಾರೆ ಎಂದು ಸ್ಪಷ್ಟಪಡಿಸಿದರು.